ಅಫಜಲಪುರ: ತಾಲೂಕಿನ ಸಾಗನೂರ ಗ್ರಾಮದ ಸರಕಾರಿ ಪ್ರೌಢಶಾಲೆ ಮಕ್ಕಳು ಇವಿಎಂ ಮತಯಂತ್ರದ ಮೂಲಕ ಮತ ಚಲಾಯಿಸಿ ಶಾಲಾ ಸಂಸತ್ತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಎಲ್ಲರ ಗಮನ ಸೆಳೆಯಿತು.
ಭಾರತದ ಚುನಾವಣಾ ಆಯೋಗ ನಡೆಸುವ ಸಾರ್ವತ್ರಿಕ ಚುನಾವಣೆಗಳು ಹಾಗೂ ಮತದಾನದ ಎಲ್ಲ ವಿಧಾನಗಳನ್ನು ಅನುಸರಿಸುವ ಮೂಲಕ ಶಾಲಾ ಸಂಸತ್ತು ರಚನೆ ಮಾಡಿ ಚುನಾವಣೆ ಪ್ರಕ್ರಿಯೆ ಅರಿತುಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಉಪಕರಣಗಳ ಬಳಕೆಯ ಮೂಲಕ ಚುನಾವಣೆಗೆ ಮೆರುಗು ತರಲಾಯಿತು. ನಂತರ ರಿಟರ್ನಿಂಗ್ ಆಫೀಸರ್‌ಗಳ ನೇಮಕ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಲಾಯಿತು.
ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ಎಲ್ಲ ಹಂತಗಳನ್ನು ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಅನುಸರಿಸಲಾಯಿತು. ಚುನಾವಣೆಗೆ ಬೇಕಾದ ಸಿಬ್ಬಂದಿ ನೇಮಕ, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹೀಗೆ ಪ್ರತಿಯೊಂದು ಪಾತ್ರಗಳನ್ನು ನಿರ್ವಹಿಸಲಾಗಿತ್ತು. ಸರ್ಕಾರಿ ಪ್ರೌಢಶಾಲೆ ಸಾಗನೂರನ 151 ಮಕ್ಕಳು ಮತ ಚಲಾಯಿಸಿದರು.
ಸಚಿನ ಈರಣ್ಣ ಜನರಲ್ ಕಾರ್ಯದರ್ಶಿಯಾಗಿ ಹಾಗೂ ಶಿವಲೀಲಾ ಉಮೇಶ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾದರು. ಸರಕಾರಿ ಪ್ರೌಢಶಾಲೆ ಸಾಗನೂರಿನ ಮುಖ್ಯಗುರು ಮಲಕಣ್ಣ ಹಚ್ಚಡದ ಮುಖ್ಯ ಚುನಾವಣಾ ಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಬಂದರವಾಡದ ಶಿಕ್ಷಕರಾದ ವಿಜಯಕುಮಾರ್ ಪಾಟೀಲ್, ಸಣ್ಣಗುರಪ್ಪ ವಿಶೇಷ ಚುನಾವಣಾ ಪರಿವೀಕ್ಷಕರಾಗಿ ಆಗಮಿಸಿದ್ದರು.
ಚುನಾವಣೆ ರಿಟರ್ನಿಂಗ್ ಅಧಿಕಾರಿಯಾಗಿ ಶಿಕ್ಷಕ ಕೆ.ಜಿ. ಪಾರಗೊಂಡ ಚುನಾವಣಾ ಅಧಿಕಾರಿಗಳಾಗಿ ಲಕ್ಷ್ಮಣ್ ಹಯ್ನಾಳಕರ್, ಶರಣಬಸಪ್ಪ ನಾಟಿಕರ್, ಶ್ರೀನಿವಾಸ್ ಯಾದವ್, ನಾಗಪ್ಪ ಪ್ರಭು, ರವಿಚಂದ್ರ ಅತನೂರ, ಬಸವರಾಜ್, ಸಿದ್ದರಾಮ್ ಮನಮಿ ಕಾರ್ಯನಿರ್ವಹಿಸಿದರು.