ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಡೆದ ತ್ರಿವಳಿ ಕೊಲೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಡ್ರೋನ್‌ಗಳು ಮತ್ತು ಶ್ವಾನದಳದ ಸಹಾಯದಿಂದ ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ತಲೆಮರೆಸಿಕೊಂಡಿರುವ ಆರೋಪಿಯ ಪತ್ನಿ ಕೂಡ ಕೊಲೆಯಾಗಿದ್ದು, ಈಕೆಯನ್ನು ಕೂಡ ಹಂತಕನೇ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸಂತೋಷ್ ರಾಮ್ ತಲೆಮರೆಸಿಕೊಂಡಿರುವ ಪಾತಕಿ. ಈತನ ಪತ್ನಿ ಚಂದ್ರಾದೇವಿ ಅವರ ಮೃತದೇಹ ಪಿತೋರಗಢದ ಹಳೆಯ ಮನೆಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಈ ಮನೆಯನ್ನು ಇತ್ತೀಚೆಗೆ ರಾಮ್ ಖರೀದಿಸಿದ್ದ. ಮನೆಗೆ ಹೊರಗಿನಿಂದ ಚಿಲಕ ಹಾಕಲಾಗಿತ್ತು. ಇವರ ಮಕ್ಕಳು ಬಾಗಿಲು ಮುರಿದು, ಒಳಗೆ ಪ್ರವೇಶಿದಾಗ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ರಾಮ್, ಶುಕ್ರವಾರ ಜಗಳದ ನಂತರ ಆತನ ಚಿಕ್ಕಮ್ಮ ಹೇಮಂತಿ ದೇವಿ (68) ಹಾಗೂ ಇವರ ಮಗಳು ಮತ್ತು ಸೊಸೆಯನ್ನು ಕೊಲೆ ಮಾಡಿ, ಪರಾರಿಯಾಗಿದ್ದ.
“ಪೊಲೀಸರು, ಪ್ರಾಂತೀಯ ಸಶಸ್ತ್ರ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಸೇರಿ ಒಟ್ಟು 60 ಸಿಬ್ಬಂದಿ ಆರೋಪಿಗಾಗಿ ತಲಾಶ್ ಮಾಡುತ್ತಿದ್ದಾರೆ. ರಾಮಗಂಗಾ ನದಿ ಕಣಿವೆ ಮತ್ತು ಗಂಗೊಳ್ಳಿಹತ್ ಪ್ರದೇಶದ ಕಡಿದಾದ ಸ್ಥಳಗಳಲ್ಲಿ ಡ್ರೋನ್‌ಗಳು ಮತ್ತು ಶ್ವಾನಪಡೆಯ ಸಹಾಯದಿಂದ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಕೊಲೆಗಳ ನಂತರ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಶ್ವಾನದಳವು ರಾಮಗಂಗಾ ನದಿ ಹರಿಯುವ ದಿಕ್ಕಿಗೆ ಸುಳಿವು ನೀಡುತ್ತಿವೆ. ಆತ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ನದಿ ಕಣಿವೆ ಪ್ರದೇಶದಲ್ಲಿ ಶೋಧ ಮುಂದುವರಿದಿದೆ’ ಎಂದು ಮಾಹಿತಿ ನೀಡಿದ್ದಾರೆ.