Advertisement

ಬಿಎಸ್‌ಎನ್‌ಎಲ್‌ನಿಂದ ಶೀಘ್ರ 4ಜಿ, 5ಜಿ ಸೇವೆ: ಸಚಿವ ಅಶ್ವಿ‌ನಿ ವೈಷ್ಣವ್‌

07:31 AM Dec 15, 2022 | Team Udayavani |

ಹೊಸದಿಲ್ಲಿ:ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನಿಂದ ಶೀಘ್ರವೇ 4ಜಿ ಮತ್ತು 5ಜಿ ಸೇವೆಗಳನ್ನು ಆರಂಭಿಸಲಾಗುತ್ತದೆ. ಪ್ರಧಾನಿ ಮೋದಿ ಅವರ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಡಿ ಅದನ್ನು ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ. ಇದೇ ವೇಳೆ, ಯುಪಿಎ ಅವಧಿಯಲ್ಲಿ ಸಂಸ್ಥೆಯನ್ನು ಬೇಕಾದಂತೆ ಬಳಕೆ ಮಾಡಲಾಗಿತ್ತು ಎಂದು ದೂರಿದ್ದಾರೆ.

Advertisement

ಲೋಕಸಭೆಯಲ್ಲಿ ಮಾತನಾಡಿದ ಅವರು, ದೂರಸಂಪರ್ಕ ಸಂಸ್ಥೆಯ ಪುನರುಜ್ಜೀವನಕ್ಕಾಗಿ ಕೇಂದ್ರ ಸರ್ಕಾರ 1.64 ಲಕ್ಷ ಕೋಟಿ ರೂ. ತೆಗೆದಿರಿಸಿದೆ ಎಂದರು. ಯುಪಿಎ ಅವಧಿಯಲ್ಲಿ ಸಂಸ್ಥೆಗಾಗಿ ಇದ್ದ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲಾಗಿತ್ತು ಎಂದಿದ್ದಾರೆ.

ಕಡಿಮೆ ವೆಚ್ಚ:
ದೇಶದಲ್ಲಿ ಮೊಬೈಲ್‌ ಡೇಟಾ ದರ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ವೆಚ್ಚದ್ದು. ಒಂದು ಜಿಬಿ ಡೇಟಾಕ್ಕೆ 20 ರೂ.ಗಳಿಗಿಂತ ಕಡಿಮೆ ಇದೆ ಎಂದರು.

ಹಿರಿಯ ನಾಗರಿಕರಿಗೆ ಇಲ್ಲ ರಿಯಾಯಿತಿ
ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ. ಕಳೆದ ವರ್ಷವೇ ಪ್ರಯಾಣಿಕರಿಗೆ ರಿಯಾಯಿತಿ ನೀಡಲು 59 ಸಾವಿರ ಕೋಟಿ ರೂ. ಸರ್ಕಾರ ವೆಚ್ಚ ಮಾಡಿದೆ ಎಂದರು.

ಪಿಂಚಣಿಗಾಗಿ 60 ಸಾವಿರ ಕೋಟಿ ರೂ., ಸಂಬಳ ನೀಡಲು 97 ಸಾವಿರ ಕೋಟಿ ರೂ., ಇಂಧನಕ್ಕಾಗಿ 40 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಸದ್ಯ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು 550 ಕಿಮೀ ದೂರದ ವರೆಗೆ ಸಂಚರಿಸುತ್ತಿವೆ ಎಂದರು.

Advertisement

ಅನುಮತಿ ವಾಪಸ್‌:
ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ 9 ರಾಜ್ಯಗಳು ಸಿಬಿಐ ತನಿಖೆಗೆ ಇದ್ದ ಅನುಮತಿ ವಾಪಸ್‌ ಪಡೆದುಕೊಂಡಿವೆ. ಛತ್ತೀಸ್‌ಗಢ, ಜಾರ್ಖಂಡ್‌, ಕೇರಳ, ಮೇಘಾಲಯ, ಮಿಜೋರಾಂ, ಪಂಜಾಬ್‌, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಇತರ ರಾಜ್ಯಗಳು.

ಬ್ಯಾಂಕ್‌ಗಳ ನೆರವಿಗೆ ಸರ್ಕಾರ:

3 ಲಕ್ಷ ಕೋಟಿ ರೂ.ಮೌಲ್ಯದ ಎನ್‌ಪಿಎ ಸಮಸ್ಯೆಯಿಂದ ಬ್ಯಾಂಕ್‌ಗಳನ್ನು ಸರ್ಕಾರ ಕಾಪಾಡಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. 415 ರಸ್ತೆ ಯೋಜನೆಗಳು ಪೂರ್ಣಗೊಂಡಿದ್ದರೂ ಶೇ.95ರಷ್ಟು ಬಿಲ್‌ ಅನ್ನು ಪಾವತಿ ಮಾಡಿರಲಿಲ್ಲ. 2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಾಕಿ ಪಾವತಿ ಮಾಡಲಾಗಿದೆ ಎಂದರು.

ಸದನಕ್ಕೆ ಸರ್ಕಾರ ಕೊಟ್ಟ ಮಾಹಿತಿ
– ದೇಶದಲ್ಲಿ 1,472 ಐಎಎಸ್‌, 864 ಐಪಿಎಸ್‌ ಅಧಿಕಾರಿಗಳ ಹುದ್ದೆ ಖಾಲಿ. ಒಟ್ಟು ಐಎಎಸ್‌ ಅಧಿಕಾರಿಗಳ ಸಂಖ್ಯೆ 6,789.
– ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ 9.79 ಲಕ್ಷ ಹುದ್ದೆಗಳು ತೆರವಾಗಿ ಇವೆ.
– ಮೂರು ವರ್ಷಗಳ ಅವಧಿಯಲ್ಲಿ 9 ಮಂದಿ ಕಾಶ್ಮೀರಿ ಪಂಡಿತರನ್ನು ಕೊಲ್ಲಲಾಗಿದೆ.
– 2031ರ ಒಳಗಾಗಿ ಹೊಸತಾಗಿ 20 ಪರಮಾಣು ಸ್ಥಾವರ ಶುರು ಮಾಡಲು ಚಿಂತನೆ

 

Advertisement

Udayavani is now on Telegram. Click here to join our channel and stay updated with the latest news.

Next