Advertisement

ಪೇದೆ ಪರೀಕ್ಷೆಯಲ್ಲೂ ಬ್ಲೂಟೂತ್‌ ಬಳಕೆ

11:28 AM Apr 28, 2022 | Team Udayavani |

ಕಲಬುರಗಿ: ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಬಯಲಾದ ಬೆನ್ನಲ್ಲೇ ಪೊಲೀಸ್‌ ಪೇದೆ ನೇಮಕದಲ್ಲೂ ಗೋಲ್‌ಮಾಲ್‌ ನಡೆದಿರುವುದು ಬೆಚ್ಚಿ ಬೀಳಿಸಿದೆ. ಅಲ್ಲದೇ ಸಿಐಡಿ ಆಗಲೇ ಎಚ್ಚೆತ್ತುಕೊಂಡಿದ್ದರೆ ಮುಂದಿನ ಅಕ್ರಮಗಳನ್ನು ತಡೆಯಬಹುದಿತ್ತು ಎಂಬ ಮಾತುಗಳೂ ಕೇಳಿ ಬರುತ್ತಿವೆ.

Advertisement

ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಪೇದೆಗಳ ನೇಮಕಾತಿ ಪರೀಕ್ಷೆಯಲ್ಲೂ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಏಳು ಕಡೆ ಪ್ರಕರಣ ದಾಖಲಾಗಿ ತದನಂತರ ಸಿಐಡಿಗೆ ಹಸ್ತಾಂತರವಾಗಿತ್ತು. ಇದಲ್ಲದೇ ಏಳು ವರ್ಷಗಳ ಹಿಂದೆ ನಡೆದಿದ್ದ ಪೇದೆಗಳ ನೇಮಕದ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಬಹಿರಂಗವಾಗಿತ್ತು.

2021, ಅ.24ರಂದು ಪೊಲೀಸ್‌ ಪೇದೆ ನೇಮಕ ಸಂಬಂಧ ನಡೆದ ಪರೀಕ್ಷೆ ದಿನವೇ ಕಲಬುರಗಿ ನಗರದ ಬಸ್‌ ನಿಲ್ದಾಣ ಪ್ರದೇಶದ ಪ್ರಿತಂ ಲಾಡ್ಜ್ನ ರೂಂ ನಂ.213ರಲ್ಲಿ ತಂಡವೊಂದು ಬ್ಲೂಟೂತ್‌ ಬಳಸಿ ಪರೀಕ್ಷಾರ್ಥಿಗಳಿಗೆ ಉತ್ತರ ಹೇಳುತ್ತಿರುವಾಗ ಇಲ್ಲಿನ ಸಿಇಎನ್‌ ತಂಡ ದಾಳಿ ನಡೆಸಿತ್ತು.

ಆ ಸಂದರ್ಭದಲ್ಲಿ ಒಂಭತ್ತು ಜನರನ್ನು ಬ್ಲೂಟೂತ್‌ ಸಮೇತ ಬಂಧಿಸಲಾಗಿತ್ತು. ಸಿಇಎನ್‌ ಠಾಣೆ ಇನ್ಸ್‌ಪೆಕ್ಟರ್‌ ಬಸವರಾಜ ತೇಲಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆಶ್ಚರ್ಯವೆಂದರೆ ಬಂಧಿತರೆಲ್ಲರೂ ಅಫ‌ಜಲಪುರ ಹಾಗೂ ಜೇವರ್ಗಿ ತಾಲೂಕಿನವರಾಗಿದ್ದರು.

ಇದೇ ತೆರನಾಗಿ ರಾಜ್ಯದ ಏಳು ಕಡೆ ಬ್ಲೂಟೂತ್‌ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದವು. ಬೆಳಗಾವಿ ವಿಭಾಗದಲ್ಲೂ ಹಲವರನ್ನು ಬಂಧಿಸಲಾಗಿತ್ತು.ಆಶ್ಚರ್ಯಕರ ಸಂಗತಿ ಎಂದರೆ 2021, ನ.22ರಂದು ನಡೆದ ಕೆಎಸ್‌ಆರ್‌ಪಿ ನೇಮಕ ಸಂದರ್ಭದಲ್ಲೂ ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದು ಹಾಗೂ ಇತರ ಅಕ್ರಮದ ಪ್ರಕರಣಗಳು ಹಲವೆಡೆ ಪತ್ತೆಯಾಗಿದ್ದವು.

Advertisement

ಸಿಐಡಿಗೆ ಹಸ್ತಾಂತರ: ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಮೂಲಕ ಅಕ್ರಮ ಎಸಗಿರುವುದನ್ನು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ ಸೂದ್‌ ಸಿಐಡಿಗೆ ಹಸ್ತಾಂತರಿಸಿದ್ದರು. ಆದರೆ ಸಿಐಡಿ ತನಿಖೆ ವಹಿಸಿಕೊಂಡ ನಂತರ ಮುಂದಿನ ತನಿಖೆ ಏನಾಯಿತು ಎಂಬುದೇ ತಿಳಿಯಲಿಲ್ಲ. ಇದೇ ಸಂದರ್ಭದಲ್ಲಿ ಪರೀಕ್ಷೆ ಅಕ್ರಮಗಳ ರೂವಾರಿ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ನನ್ನು ಸಿಐಡಿ ಕರೆಯಿಸಿ ವಿಚಾರಿಸಿತ್ತಾದರೂ ಮುಂದೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತದನಂತರ ಒಂದರ ಮೇಲೆ ಮತ್ತೂಂದು ಅಕ್ರಮ ಎಸಗಲು ಸಾಧ್ಯವಾಯಿತು ಎಂಬುದೇ ಸೋಜಿಗ.

ಎಚ್ಚೆತ್ತುಕೊಳ್ಳ ಲಿಲ್ಲ ಏಕೆ? ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಕೆ ಮಾಡಿ ಅಕ್ರಮ ಎಸಗುತ್ತಿದ್ದ ವೇಳೆಯಲ್ಲಿ ಬಂಧಿತರಾವದರು ತಾವು ಪರೀಕ್ಷೆಯಲ್ಲಿ ಪಾಸಾದರೆ 6 ಲಕ್ಷ ರೂ. ಕೊಡುವುದು ಹಾಗೂ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಹೆಸರು ಹೇಳಿದ್ದರು. ಇದೇ ಕಾರಣಕ್ಕೆ ಆರ್‌.ಡಿ.ಪಾಟೀಲ್‌ನನ್ನು ಸಿಐಡಿ ಕೇಂದ್ರ ಕಚೇರಿಗೆ ಕರೆಯಿಸಲಾಗಿತ್ತು ಎನ್ನಲಾಗಿದೆ. ಒಂದು ವೇಳೆ ಅಕ್ರಮ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಿದ್ಧಪಡಿಸಿ ಎಲ್ಲ ಆಯಾಮಗಳಲ್ಲಿ ಅದರಲ್ಲೂ ಆಳವಾಗಿ ತನಿಖೆ ಮಾಡಿ ಒಂದು ಹಂತಕ್ಕೆ ಮುಟ್ಟಿಸಿದ್ದರೆ ಪಿಎಸ್‌ಐ, ಲೋಕೋಪಯೋಗಿ, ಎಫ್ ಡಿಸಿ, ಪ್ರಾಧ್ಯಾಪಕ ನೇಮಕದ ಪರೀಕ್ಷೆಯಲ್ಲಿ ಅಕ್ರಮ ನಡೆಯುವುದಕ್ಕೆ ಬ್ರೇಕ್‌ ಹಾಕಬಹುದಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಶೀಘ್ರ ದಿವ್ಯಾ ಶರಣಾಗತಿ? ಪಿಎಸ್‌ಐ ನೇಮಕದ ಪರೀಕ್ಷೆ ಅಕ್ರಮ ಬಗೆದಷ್ಟು ಆಳವಾಗುತ್ತಿದೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕಳೆದ 16 ದಿನಗಳಿಂದ ಸಿಐಡಿ ತಂಡಕ್ಕೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು ಸವಾಲಾಗಿ ಪರಿಣಮಿಸಿದೆ. ಈ ನಡುವೆ ಸಿಐಡಿ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿ ಸಿದಂತೆ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಹಾಗೂ ಅವರ ತಂಡಕ್ಕೆ ನಿರೀಕ್ಷಣಾ ಜಾಮೀನು ನೀಡದಂತೆ ಬುಧವಾರ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದೆ. ಮಂಗಳವಾರ ಜಿಲ್ಲಾ ನ್ಯಾಯಾಲಯ ದಿವ್ಯಾ ಹಾಗರಗಿ ಸೇರಿ 6 ಜನರಿಗೆ ವಾರಂಟ್‌ ಹೊರಡಿಸಿತ್ತು. ವಾರದೊಳಗೆ ಶರಣಾಗತಿಯಾಗದಿದ್ದರೆ ಆಸ್ತಿ ಮುಟ್ಟುಗೋಲಿಗೆ ಅವಕಾಶವಿದೆ. ಬಲ್ಲ ಮಾಹಿತಿಗಳ ಪ್ರಕಾರ ಒಂದೆರಡು ದಿನದಲ್ಲಿ ದಿವ್ಯಾ ಹಾಗರಗಿ ಬಂಧನವಾಗುವ ಇಲ್ಲವೇ ಶರಣಾಗತಿಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next