ಉಪ್ಪಿನಂಗಡಿ: ಬದುಕನ್ನು ಬೆಳಗಿಸಲು ಮತ್ತು ಬದುಕನ್ನು ನಂದಿಸಲು ಕಾರಣವಾಗುತ್ತಿರುವ ಮೊಬೈಲ್ ಬಳಕೆಯ ಬಗ್ಗೆ ಯುವ ಸಮೂಹ ಎಚ್ಚರಿಕೆಯಿಂದ ಇರಬೇಕು. ಸದುದ್ದೇಶಕ್ಕೆ ಮಾತ್ರ ಮೊಬೈಲ್ ಬಳಸುವ ದೃಢ ನಿರ್ಧಾರವನ್ನು ವಿದ್ಯಾರ್ಥಿ ಸಮೂಹ ಕೈಗೊಂಡರೆ ಯಶಸ್ಸು ನಮ್ಮ ಕೈಯೊಳಗಿರುತ್ತದೆ ಎಂದು ಪ್ರೊಬೆಷನರಿ ಎಎಸ್ಪಿ ಪ್ರದೀಪ್ ಗುಂಟಿ ಕರೆ ನೀಡಿದರು.
ಅವರು ಶನಿವಾರ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಗಳಲ್ಲಿ ಆಗುವ ಸಾಧಕ- ಬಾಧಕಗಳ ಬಗ್ಗೆ ಹಮ್ಮಿಕೊಳ್ಳಲಾದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮೊಬೈಲ್‌ಗಳು ವ್ಯಕ್ತಿಯ ಬದುಕಿಗೆ ಬಹು ದೊಡ್ಡ ಅಪಾಯವಾಗಿ ಪರಿಣಮಿ ಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರಗತಿ ಪಥದಲ್ಲಿ ಸಾಗುತ್ತಿರುವ ವಿದ್ಯಾರ್ಥಿಗಳಿಗೆ ಮಾರಕವಾಗುತ್ತಿದೆ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಯಾವೆಲ್ಲ ರೀತಿಯಲ್ಲಿ ದಾರಿ ತಪ್ಪಲು ಸಾಧ್ಯ ಎನ್ನುವುದನ್ನು ವಿವರಿಸಿದರು.
ಶೈನಿ ಪ್ರದೀಪ್ ಗುಂಟಿ ಅವರು ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಹಿಂಬಾಲಿಸುವುದು, ಲೈಂಗಿಕ ಕಿರುಕುಳ ಮತ್ತು ಸಾಮಾಜಿಕ ಜಾಲತಾಣ ಇವುಗಳ ಬಗ್ಗೆ ಉದಾಹರಣೆ ಸಮೇತ ಹೆಣ್ಣು ಮಕ್ಕಳು ಸದಾ ಎಚ್ಚರಿಕೆಯಿಂದ ಇರುವಂತೆ ಅವರು ಕರೆ ಇತ್ತರು.
ಶಾಲಾ ಸಂಚಾಲಕ ಯು.ಎಸ್.ಎ. ನಾಯಕ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರವೀಂದ್ರ ಡಿ. ಉಪಸ್ಥಿತರಿ ದ್ದರು. ಉಪ ಪ್ರಾಂಶುಪಾಲ ಜೋಸ್ ಎಂ.ಜೆ. ಸ್ವಾಗತಿಸಿ, ಉಪನ್ಯಾಸಕಿ ಜಯಂತಿ ವಂದಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.