ಕೋಲಾರ: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಿಟ್ಟಿರುವ ಅನು ದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಜಿಲ್ಲಾ ಮಟ್ಟದ ಅ ಕಾರಿಗಳಿಗೆ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸೂಚನೆ ನೀಡಿದರು.
ಮಂಗಳವಾರ ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿಯ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಒಟ್ಟು 2.29 ಲಕ್ಷ ಅಲ್ಪಸಂಖ್ಯಾತರಿದ್ದಾರೆ. ಹಾಸ್ಟೆಲ್‌ಗಳು, ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಜಾಗವನ್ನು ನೀಡಲಾಗಿದೆ. ನಿರ್ಮಾಣ ಹಂತದಲ್ಲಿರುವ ಶಾಲಾ ಕೊಠಡಿ ಗಳು, ಹಾಸ್ಟೆಲ್‌ಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಟ್ಟಡಗಳ ನಿರ್ಮಾಣಕ್ಕೆ ನಿವೇಶನ: ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಶಾಲೆಗಳಿಗೆ ಪ್ರಧಾನ ಮಂತ್ರಿ ಜನ ವಿಕಾಸ್ ಯೋಜನೆಯಡಿ, ಹೆಚ್ಚುವರಿ ಕೊಠಡಿಗಳನ್ನು ನೀಡಲಾಗುವುದು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದರು. ಜಿಲ್ಲೆಯಲ್ಲಿ 102 ಅಲ್ಪಸಂಖ್ಯಾತರ ಅಂಗನವಾಡಿಗಳಿದ್ದು, ಇದರಲ್ಲಿ 60ಕ್ಕೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ನಿವೇಶನ ನೀಡಲಾಗುವುದು. ಇವುಗಳ ನಿರ್ಮಾಣವನ್ನು ನರೇಗಾ ಯೋಜನೆಯಡಿ ನಿರ್ಮಿಸಲು ಕ್ರಮ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅ ಕಾರಿಗಳಿಗೆ ಸೂಚಿಸಿದರು.
ಅಗತ್ಯ ಮಾಹಿತಿ ಇರಲಿ: ಕೌಶಲ್ಯ ಯೋಜನೆಯಡಿ ಅಲ್ಪಸಂಖ್ಯಾತರಿಗೆ ತರಬೇತಿ ನೀಡಬೇಕು. ಸ್ವ ಉದ್ಯೋಗ ಕೈಗೊಳ್ಳಲು ಸಾಲ ವಿತರಣೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. 4ನೇ ತ್ತೈಮಾಸಿಕ ಬಂದರೂ ಕೆಲವು ಇಲಾಖೆಗಳು ನಿರೀಕ್ಷಿತ ಪ್ರಗತಿ ಸಾಧನೆ ಆಗಿಲ್ಲ. ಕಾಟಾಚಾರಕ್ಕೆ ಸಭೆ ನಡೆಸುವುದಿಲ್ಲ. ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಸೂಚಿಸಿದರು.
ಉದ್ಯೋಗ ಅವಕಾಶ: ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಮುಸ್ಲಿಮರು ಇತ್ತೀಚೆಗೆ ಉರ್ದು ಶಾಲೆಗಳನ್ನು ಬಿಟ್ಟು, ತಮ್ಮ ಮಕ್ಕಳನ್ನು ಕನ್ನಡ ಮತ್ತು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಇದರಿಂದ ಅವರಿಗೆ ಹೆಚ್ಚಿನ ಉದ್ಯೋಗ ಪಡೆಯಲು ಅವಕಾಶವಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಿಇಒ ದರ್ಶನ್, ಉಪಕಾರ್ಯದರ್ಶಿ ಸಂಜೀವಪ್ಪ, ಕೈಗಾರಿಕಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ರವಿಚಂದ್ರನ್, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೈಲಾರಪ್ಪ ಉಪಸ್ಥಿತರಿದ್ದರು.