Advertisement

ಜೀವಜಲ ಮಿತವಾಗಿ ಬಳಸಿ: ನ್ಯಾ|ಹೊಸಗೌಡರ್‌

10:44 AM Mar 23, 2018 | Team Udayavani |

ದಾವಣಗೆರೆ: ಅತ್ಯಮೂಲ್ಯವಾದ ಜೀವಜಲ ಮಿತವಾಗಿ ಬಳಸಿ, ಅನಾವ್ಯಶಕವಾಗಿ ನೀರು ಪೋಲು ಮಾಡುವುದನ್ನು ನಿಲ್ಲಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌ ಸಾರ್ವಜನಿಕರಿಗೆ ತಿಳಿಸಿದ್ದಾರೆ.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಸಕಲ ಜೀವರಾಶಿಗಳಿಗೂ ನೀರು ಅತ್ಯಮೂಲ್ಯ ಸಂಪತ್ತು. ಆಹಾರವಿಲ್ಲದೇ ಸ್ವಲ್ಪ ಸಮಯ ಬದುಕಬಹುದು. ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಹಾಗಾಗಿ ಇಡೀ ಜಗತ್ತಿನಲ್ಲಿ ನೀರಿನ ಸದ್ಬಳಕೆ ಆಗಬೇಕು ಹಾಗೂ ಮಳೆಗಾಲ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಿಸಬೇಕು ಎಂಬುದೇ ವಿಶ್ವ ಜಲ ದಿನಾಚರಣೆ ಉದ್ದೇಶ ಎಂದರು. 

ಪ್ರಸ್ತುತ ದಿನಮಾನಗಳಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಆಧುನೀಕರಣ, ಕೈಗಾರೀಕರಣ ಮತ್ತು ನಗರೀಕರಣದಿಂದಾಗಿ ಇಂದು ಅರಣ್ಯ ಮತ್ತು ಸಸ್ಯ ಸಂಪತ್ತು ನಾಶವಾಗಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಉಷ್ಣಾಂಶ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಲಭ್ಯವಿರುವ ಜಲಸಂಪನ್ಮೂಲ ಮಿತವಾಗಿ ಬಳಸಿಕೊಂಡು ಅನಗತ್ಯವಾಗಿ ನೀರು ಪೋಲು ತಪ್ಪಿಸಬೇಕು ಎಂದು ಅವರು ಹೇಳಿದರು. 

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಹಿಂದಿನ ಕಾಲದಲ್ಲಿ ದಾರಿಹೋಕರು ದಣಿವಾರಿಸಿಕೊಳ್ಳಲು ಮರಗಳ ಬಳಿ ಕುಳಿತುಕೊಂಡರೆ, ಹಿರಿಯರು ನೀರು ಕೊಟ್ಟು ಉಪಚರಿಸುತ್ತಿದ್ದರು. ಆದರೆ ಇಂದು ನೀರನ್ನು ದುಡ್ಡು ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ನೈಸರ್ಗಿಕವಾಗಿ ದೊರಕುವಂತಹ ಸಂಪನ್ಮೂಲದ ಅಸಮರ್ಪಕ ಬಳಕೆಯೇ ಇದಕ್ಕೆ ಕಾರಣ ಎಂದರು. 

ಆಧುನೀಕರಣ ಭರದಲ್ಲಿ ಅರಣ್ಯ ನಾಶ, ಪರಿಸರ ಮಾಲಿನ್ಯ ಹಾಗೂ ನಗರೀಕರಣ ಹೆಸರಿನಲ್ಲಿ ಎಲ್ಲಾ ಜಮೀನುಗಳು ಲೇಔಟ್‌ಗಳಾಗಿವೆ. ಮಣ್ಣಿನ ರಸ್ತೆಗಳು ಸಿಮೆಂಟ್‌ ರಸ್ತೆಗಳಾಗಿವೆ. ಹಣ ಕೊಟ್ಟು ಬಾಟಲಿ ನೀರು, ಫಿಲ್ಟರ್‌ ನೀರು ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.

Advertisement

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌ ಮಾತನಾಡಿ, ಆಫ್ರಿಕಾ, ಸೋಮಾಲಿಯಾ
ರಾಷ್ಟ್ರಗಳಲ್ಲಿ ಸರ್ಕಾರವೇ ಪ್ರತಿ ವ್ಯಕ್ತಿಗೆ ದಿನಕ್ಕೆ 50 ಲೀಟರ್‌ ನೀರನ್ನು ಪಡಿತರ ರೀತಿ ವಿತರಿಸುತ್ತಿದೆ. ಇಂತಹ ಪರಿಸ್ಥಿತಿ ನಮ್ಮ ರಾಜ್ಯಕ್ಕೂ ಮುಂದೆ ಬರುವುದರಲ್ಲಿ ಅನುಮಾನವೇ ಇಲ್ಲ. ಸರ್ಕಾರ ನೀರಿನ ಸಂಪನ್ಮೂಲಗಳನ್ನು ರಕ್ಷಿಸುವ ಕುರಿತು ಕ್ರಮ ಕೈಗೊಳ್ಳಬೇಕು. ಕೂಡಲೇ ನೀರಿನ ಅಸಮರ್ಪಕ ಬಳಕೆ ಹಾಗೂ ಪೋಲು ಮಾಡುವ ವಿರುದ್ಧ ಕಠಿಣ ಕಾನೂನು ರೂಪಿಸಿ ನೀರನ್ನು ಸಂರಕ್ಷಿಸಬೇಕಿದೆ. ನೀರಿನ ಸಮರ್ಪಕ ಬಳಕೆ ಕುರಿತು ಕಾನೂನು ಜಾರಿ ಮಾಡಬೇಕೆಂದರು. 

ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಚ್‌. ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಸಹಾಯಕ ಪ್ರಾಧ್ಯಾಪಕಿ ಶಶಿಕಲಾ ಜಿ.ಎಂ, ಉಪನ್ಯಾಸಕಿ ರುಕ್ಸಾನ ಅಂಜುಂ ಎಮ್‌.ಎ ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next