Advertisement

ಗ್ರಾಹಕ ಜಾಗೃತಿ ಸಮುದಾಯದ ಆಂದೋಲನವಾಗಲಿ

07:21 AM Mar 16, 2019 | Team Udayavani |

ದಾವಣಗೆರೆ: ಗ್ರಾಹಕ ಜಾಗೃತಿ ಇಡೀ ಸಮುದಾಯವೇ ಭಾಗವಹಿಬೇಕಾಗಿರುವ ಆಂದೋಲನ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್‌ ಜಿ.,ತಿಳಿಸಿದ್ದಾರೆ. 

Advertisement

ಶುಕ್ರವಾರ ಆರ್‌ಎಲ್‌ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕ ಜಾಗೃತಿ ಕೇವಲ ವ್ಯಕ್ತಿ ಕೇಂದ್ರಿತ ಅಲ್ಲ. ಎಲ್ಲರೂ ಸಾಮೂಹಿಕವಾಗಿ ಭಾಗವಹಿಸುವಂತಾಗಬೇಕು. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಜವಾಬ್ದಾರಿಗಳನ್ನು ಅರಿತಿರಬೇಕು ಎಂದರು.
 
1962ರಲ್ಲಿ ಅಮೆರಿಕಾ ಅಧ್ಯಕ್ಷ ಜಾನ್‌ ಎಫ್‌. ಕೆನಡಿ ನಾಲ್ಕು ಗ್ರಾಹಕರ ಹಕ್ಕುಗಳನ್ನು ಒಳಗೊಂಡ ವಿಧೇಯಕ ಪ್ರಕಟಿಸುವ ಮೂಲಕ ಜಗತ್ತಿನಾದ್ಯಂತ ಗ್ರಾಹಕರ ಹಕ್ಕುಗಳು ಜಾರಿಗೆ ಬರಲು ಕಾರಣರಾದರು. 

ಗ್ರಾಹಕರು ಮಾರುಕಟ್ಟೆಯ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ ಅವರ ಅಗತ್ಯಗಳನ್ನು ಪೂರೈಸುವಲ್ಲಿ ಮಾರುಕಟ್ಟೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಗ್ರಾಹಕರು ನಿತ್ಯದ ವ್ಯವಹಾರದಲ್ಲಿ ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಶೋಷಣೆ ಮುಕ್ತರನ್ನಾಗಿ ಮಾಡಲು ಅವರ ಪರವಾಗಿ 1986ರಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ತಂದು ಗ್ರಾಹಕರಿಗೆ ಸುರಕ್ಷತೆ ಹಕ್ಕು, ಮಾಹಿತಿ ಹಕ್ಕು, ಆಯ್ಕೆ ಮಾಡಿಕೊಳ್ಳುವ ಹಕ್ಕಿನ ಜೊತೆಗೆ ಪರಿಹಾರ ಪಡೆಯುವ ಹಕ್ಕನ್ನೂ ಸಹ ನೀಡಲಾಗಿದೆ ಎಂದು ತಿಳಿಸಿದರು. 

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌ ಮಾತನಾಡಿ, ಈಗಿನ ಜಾಹೀರಾತುಗಳು ಬಹುತೇಕ ಉತ್ಪೇಕ್ಷೆಯಿಂದ ಕೂಡಿರುತ್ತವೆ. ಗ್ರಾಹಕರು ಕಂಡದ್ದನ್ನೆಲ್ಲಾ ಖರೀದಿಸಬೇಕೆಂಬ ಆಸೆಗೆ ಬಲಿಯಾಗುತ್ತಿದ್ದಾರೆ. ಸರಕು ಸಂಸ್ಕೃತಿ ಬಳಕೆದಾರರಿಗೆ ಮಾತ್ರವಲ್ಲ, ಸಮಾಜಕ್ಕೂ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದರು. 

ರೈತರು ದೇಶದ ಬಹುದೊಡ್ಡ ಗ್ರಾಹಕರಾಗಿದ್ದಾರೆ. ಆದರೆ, ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ತೊಂದರೆ
ಅನುಭವಿಸುತ್ತಿದ್ದಾರೆ. ಅಲ್ಲದೇ ವಿದ್ಯಾವಂತರೂ ಸಹ ತಪ್ಪು ಮಾಹಿತಿ ನೀಡುವ ಜಾಹೀರಾತುಗಳಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ನೋಟು ಅಪಮೌಲ್ಯದ ನಂತರ ಹಣ ಮತ್ತು ಹಣದ ಮೌಲ್ಯಗಳ ಚಿಂತನೆಗಳು, ಜನ ಸಾಮಾನ್ಯರನ್ನು ಚಿಂತೆಗೀಡು ಮಾಡಿವೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ತನ್ನಲ್ಲಿ ಇರಿಸಿಕೊಳ್ಳಲಾಗದ, ಬೇರೆಡೆಯಲ್ಲಿ ಇರಿಸಿದರೆ ಅಗತ್ಯಕ್ಕೆ ಪಡೆದು ಬಳಸಲಾಗದ ಸ್ಥಿತಿಯಿಂದ ಗ್ರಾಹಕರು ಹತಾಶರಾಗಿದ್ದಾರೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ| ಬಿ.ಎಸ್‌.ರೆಡ್ಡಿ ಮಾತನಾಡಿ, ಆಧುನಿಕ ಮಾರುಕಟ್ಟೆ ಸಿದ್ಧಾಂತ ಗ್ರಾಹಕರನ್ನು ಮಾರುಕಟ್ಟೆಯ ರಾಜರೆಂದು ಪರಿಗಣಿಸಿದೆ. ಹೆಚ್ಚುತ್ತಿರುವ ಪೈಪೋಟಿ ಹಾಗೂ ಅನುಚಿತ ವ್ಯಾಪಾರ ಪದ್ಧತಿಗಳಿಂದ ಗ್ರಾಹಕರು ವಂಚನೆಗೆ ಒಳಗಾಗುತ್ತಿದ್ದಾರೆ. ಗ್ರಾಹಕರೇ ಎಚ್ಚರ ಎಂಬ ಸಿದ್ಧಾಂತಕ್ಕೆ ಬದಲಾಗಿ ಮಾರಾಟಗಾರನೇ ಎಚ್ಚರ ಎಂಬ ಸಿದ್ಧಾಂತ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ರೇಷ್ಮಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ವಿದ್ಯಾಧರ್‌ ಸ್ವಾಗತಿಸಿದರು. ಜಿ.ಎಸ್‌ ಯತೀಶ್‌ ವಂದಿಸಿದರು.

ಗ್ರಾಹಕರು ಖರೀದಿಸಲು ಇಚ್ಛಿಸುವ ಸರಕು, ಪದಾರ್ಥ ಅಥವಾ ಸೇವೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಅಗತ್ಯ, ಗುಣಮಟ್ಟ, ಬೆಲೆ, ಉಪಯುಕ್ತತೆ, ಅಪಾಯ ಇತ್ಯಾದಿಗಳ ಬಗ್ಗೆ ಗಮನ ಹರಿಸಬೇಕು. ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲಾ ಧ್ವನಿ ಎತ್ತಲು ಹಿಂಜರಿಯಬಾರದು. ಬಳಕೆದಾರರನ್ನು ಹೊರತುಪಡಿಸಿ ಮಾರುಕಟ್ಟೆಯ ಎಲ್ಲಾ ವರ್ಗದವರೂ ಸಂಘಟಿತರಾಗಿದ್ದಾರೆ. ಬಳಕೆದಾರರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. 
 ಎ.ಜಿ. ಮಾಲ್ದಾರ್‌, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next