ಮಳವಳ್ಳಿ: ಕಾಲುವೆಗಳ ಮೂಲಕ ಬರುವ ನೀರನ್ನು ಭೂಮಿಗೆ ಹಾಯಿಸಿ ಕೃಷಿ ಮಾಡುವ ವಿಧಾನದ ಬದಲು ಹನಿ ನೀರಾವರಿಯನ್ನು ಆಳವಡಿಸಿ ಕೊಂಡರೇ ಹೆಚ್ಚು ಇಳುವರಿಯ ಜೊತೆಗೆ ನೀರಿನ ಕೊರತೆಯೂ ಕಡಿಮೆ ಮಾಡಿ ಮತ್ತಷ್ಟು ರೈತರಿಗೆ ಅನುಕೂಲವಾಗಲಿದೆ ಎಂದು ಬೇಸಾಯ ತಜ್ಞ ಪಿ.ವಿ.ಜೋಷಿ ತಿಳಿಸಿದರು.
ತಾಲೂಕಿನ ಉಢಪೆಬೂವಳ್ಳಿ(ಕಣಿಕಹಳ್ಳಿ)ಯಲ್ಲಿ ಪೂರಿಗಾಲಿ ಸಂಪೂರ್ಣ ಸ್ವಯಂ ಚಾಲಿತ ಹನಿ ಹಾಗೂ ತುಂತುರು ನೀರಾವರಿ ಯೋಜನೆಯಲ್ಲಿ ಬೆಳೆದಿರುವ ಕ್ಯಾರೆಟ್ ಹಾಗೂ ಮೂಲಂಗಿ ವಿಶೇಷ ಹೈಬ್ರಿಡ್ ತಳಿಯ ಮಾದರಿ ಪ್ರಾತ್ಯಕ್ಷತೆಯಲ್ಲಿ ರೈತರಿಗೆ ಮಾಹಿತಿ ನೀಡುತ್ತಾ ಮಾತನಾಡಿ, ಈ ಬೆಳೆಗಳಿಗೆ ಸೂಕ್ತ ಕೃಷಿ ಪದ್ದತಿ ಅನುಸಾರವಾಗಿ ಮಣಿನ ಪರೀಕ್ಷೆ ನೀರಿನ ಪರೀಕ್ಷೆ, ಸೂಕ್ತ ರಸಾವರಿ ಗೊಬ್ಬರಗಳ ಬಳಕೆ. ಎತ್ತರದ ಮಡಿ ಕಟ್ಟುವಿಕೆ, ಹಾಗೂ ತುಂತುರು ನೀರಾವರಿ ಬಳಕೆಯಿಂದ ಉತ್ತಮವಾದ ಬೆಳೆಯನ್ನು ಬೆಳೆಯಬಹುದಾಗಿದೆ ಎಂದರು.
ಪ್ರಾತ್ಯಕ್ಷತೆಗೆ ಪೂರಿಗಾಲಿ ಹನಿ ನೀರಾವರಿ ಯೋಜನೆಯಡಿಯಲ್ಲಿರವ ಎಲ್ಲಾ 50 ಗ್ರಾಮಗಳ ರೈತ ಪಲಾನುಭವಿಗಳಿಗೆ ಭೇಟಿಯಾಗುವಂತೆ ವ್ಯವಸ್ಥೆ ಮಾಡಿ ಪ್ರಾತ್ಯಕ್ಷತೆ ಬಗ್ಗೆ ವಿವರಣೆ ನೀಡಲಾಗಿದೆ. ಹತ್ತು ದಿನಗಳ ಕಾಲ ರೈತರಿಗೆ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿಯವರೆಗೂ ಸುಮಾರು 500ಕ್ಕೂ ಹೆಚ್ಚು ರೈತರನ್ನು ಕರೆತಂದು ಹನಿ ನೀರಾವರಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹನಿ ನೀರಾವರಿ ಯೋಜನೆಯಿಂದ ನೀರಿನ ಸದ್ಬಳಕೆ ಹಾಗೂ ಬೆಳೆ ಉತ್ಪಾದನೆಯಲ್ಲಿ ಹೆಚ್ಚಳ ಕಾಣಬಹುದು. ಈ ಪದ್ಧತಿಯಿಂದ ಬೆಳೆಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ನೀಡಬಹುದು. ಶೇ.50ರಿಂದ 80ರಷ್ಟು ನೀರಿನ ಉಳಿತಾಯವಾಗಲಿದೆ ಎಂದರು.
ಸಾಂಪ್ರದಾಯಿಕ ವಿಧಾನದಲ್ಲಿ ನೀರನ್ನು ಸಮಾನ್ಯವಾಗಿ ಮಣ್ಣಿನ ಕಾಲುವೆಯಲ್ಲಿ ಹಾಯಿಸುವುದರಿಂದ ಶೇ.30ರಿಂದ 40 ರಷ್ಟು ನೀರು ಪೋಲಾಗುತ್ತದೆ, ಜೊತೆಗೆ ಜಮೀನಿನ ಗುಣಮಟ್ಟವೂ ಕಡಿಮೆಯಾಗುತ್ತದೆ. ಆದರೆ, ಸೂಕ್ಷ್ಮ ನೀರಾವರಿ ಪದ್ದತಿಯಿಂದ ನೀರನ್ನು ಕೊಳವೆ ಮೂಲಕ ನೇರವಾಗಿ ಗಿಡಗಳ ಬುಡಕ್ಕೆ ಸಾಗಿಸಿ ಬೇರಿನ ವಲಯದ ಭಾಗ ನೆನೆಯುವಂತೆ ಮಾಡಿ ಗಿಡದ ಬೆಳವಣಿಗೆಗೆ ಅಗತ್ಯ ಇರುವಷ್ಟು ನೀರನ್ನು ಕೊಡುವುದರಿಂದ ಕಳೆಯೂ ಕಡಿಮೆಯಾಗಿ ಬೆಳೆ ಚನ್ನಾಗಿ ಬೆಳೆಯುತ್ತದೆ ಎಂದರು.
ಹನಿ ನೀರಾವರಿಯಿಂದ ಕೂಲಿಯ ಖರ್ಚು ಮಾಡಿಮೆಯಾಗುತ್ತದೆ, ಹೆಚ್ಚು ಲಾಭದ ಬೆಳೆಯನ್ನು ಬೆಳೆಯಬಹುದಾಗಿದೆ, ಪೂರಿಗಾಲಿ ಹನಿ ನೀರಾವರಿ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಂಡರೇ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ನಡೆದು ರೈತರು ಹೆಚ್ಚು ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಜೈನ್ ಇರಿಗೇಷನ್ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.