ಹೊಸದಿಲ್ಲಿ: ದುಸ್ಸಾಹಸಿ ಚೀನದ ವಿಸ್ತರಣೆ ಹುಚ್ಚು ಇಳಿಸಲು ಭಾರತ- ಅಮೆರಿಕ ಕಡಲ ವ್ಯಾಪ್ತಿಯಲ್ಲಿ “ಮಲಬಾರ್’ ಮಾರುತ ಎಬ್ಬಿಸಲು ಸಜ್ಜಾಗಿವೆ. ಬಹುನಿರೀಕ್ಷಿತ ಮಲಬಾರ್ ಕಡಲ ವ್ಯಾಯಾಮಕ್ಕಾಗಿ ಅಮೆರಿಕದ ಪರಮಾಣು ಶಸ್ತ್ರಗಳನ್ನು ಹೊತ್ತ ಯುಎಸ್ಸೆಸ್ ನಿಮಿಟ್ಜ್ ಹಾಗೂ ಅದರ ಸಹಚರ ಸಮರನೌಕೆಗಳು ಮಲಾಕ್ಕಾ ಜಲಸಂಧಿ ದಾಟಿ ಹಿಂದೂ ಮಹಾಸಾಗರ ಪ್ರವೇಶಿಸಿವೆ.
ಬಂಗಾಳಕೊಲ್ಲಿಯಲ್ಲಿ ಭಾರತ, ಅಮೆರಿಕ, ಜಪಾನ್ ಜಂಟಿಯಾಗಿ ನಡೆಸುವ ಮಲಬಾರ್ ನೌಕಾ ಸಮರ ವ್ಯಾಯಾಮಕ್ಕೆ ಈ ಬಾರಿ ಆಸ್ಟ್ರೇಲಿಯಾವೂ ಕೂಡಿಕೊಳ್ಳಲಿದೆ. ಕಡಲ ನೀರಿನ ಮೇಲಿನ ಈ ವಿರಾಟದರ್ಶನಕ್ಕೂ ಮುನ್ನ ಭಾರತ- ಅಮೆರಿಕದ ನೌಕಾಪಡೆಗಳು ದಿ ಪಾಸೆಕ್ಸ್ (ಸಂಚಾರ ಅಭ್ಯಾಸ) ನಡೆಸಲು ಮುಂದಾಗಿವೆ.
ಜತೆಗೂಡಿದ ಅಮೆರಿಕ: ಭಾರತೀಯ ನೌಕಾಪಡೆಯ ಯುದ್ಧಹಡಗುಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಬಳಿ ಈಗಾಗಲೇ ಒಂದು ವಾರದಿಂದ ಸಮರಾಭ್ಯಾಸ ನಡೆಸುತ್ತಿವೆ. ಈ ನಡುವೆ ಯುಎಸ್‌ನ 10 ನಿಮಿಟ್ಜ್ ಕ್ಲಾಸ್ ಸೂಪರ್ ಕ್ಯಾರಿಯರ್ ಜಂಟಿ ಸಮರಕಹಳೆ ಊದಲಿವೆ. ಯುಎಸ್‌ನ ಪ್ರತಿ ಸಮರನೌಕೆಗಳೂ 10 ಸಾವಿರ ಟನ್ ತೂಕ ಹೊರುವ ಸಾಮರ್ಥ್ಯ ಹೊಂದಿದ್ದು, 80-90 ಯೋಧರನ್ನು ಹೊತ್ತೂಯ್ಯಲಿವೆ.
ಅಮೆರಿಕ ಸಂಸದರ ಬೆಂಬಲ: ಇನ್ನೊಂದೆಡೆ ಚೀನ ವಿರುದ್ಧ ಅಮೆರಿಕದ ಮತ್ತಷ್ಟು ಸಂಸದರು ಭಾರತ ಬೆಂಬಲಿಸುವ ನಿರ್ಣಯ ಅಂಗೀಕರಿಸಿದ್ದಾರೆ. ರಾಜ ಕೃಷ್ಣ ಮೂರ್ತಿ ನೇತೃತ್ವದ 9 ಸಂಸದರ ತಂಡ ನಿರ್ಣಯ ಅಂಗೀಕರಿಸಿದ್ದು, ಸೇನಾ ಬಲದಿಂದ ಗಡಿವಿಸ್ತರಣೆ ನಡೆಸುವ ಚೀನ ನಡೆಗೆ ಧಿಕ್ಕಾರ ಕೂಗಿದೆ. ಎಲ್‌ಎಸಿಯಿಂದ ಚೀನ ತನ್ನ ಸೇನೆ ಹಿಂತೆಗೆದುಕೊಳ್ಳಬೇಕೆಂದೂ ಒತ್ತಾಯಿಸಿವೆ.
ಜಪಾನ್‌ಗೆ ಮತ್ತೆ ಚೀನ ಕಿರಿಕ್
ಲಡಾಖ್‌ನಿಂದ ಜಪಾನ್ ದ್ವೀಪಗಳವರೆಗೆ ಚೀನ ತನ್ನ ಭೂದಾಹವನ್ನು ವಿಸ್ತರಿಸುತ್ತಲೇ ಇದೆ. ಪೂರ್ವ ಚೀನ ಸಮುದ್ರದಲ್ಲಿನ ಸೆನ್‌ಕಾಕು ದ್ವೀಪವನ್ನು ತನ್ನದೆಂದು ಘೋಷಿಸುತ್ತಿರುವ ಚೀನ, ಇದರ ಸಮೀಪ ಜಪಾನ್ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಪಸ್ವರ ತೆಗೆಯುತ್ತಿದೆ. ಈ ಮೊದಲು ಇಲ್ಲಿನ 5 ದ್ವೀಪಗಳ ಸುತ್ತಮುತ್ತ ಜಪಾನ್ ಮಿಲಿಟರಿ ಪ್ರವೇಶವನ್ನು ಚೀನ ವಿರೋಧಿಸುತ್ತಿತ್ತು. ಈಗ ಮೀನುಗಾರಿಕಾ ಹಡಗುಗಳಿಗೂ ನೋ ಎಂಟ್ರಿ ಎನ್ನುತ್ತಿದೆ.