ವಾಷಿಂಗ್ಟನ್: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ಸಮರ್ಪಕ ವೆಂಟಿಲೇಟರ್ ಗಳನ್ನು ಪೂರೈಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಮೆರಿಕಾದ ಸ್ನೇಹಿತ ಭಾರತಕ್ಕೆ ವೆಂಟಿಲೇಟರ್ ಗಳನ್ನು ದಾನ ಮಾಡಲಾಗುವುದು ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯ ಜೊತೆ ನಿಲ್ಲುತ್ತೇವೆ. ಲಸಿಕೆ ಅಭಿವೃದ್ಧಿಗೂ ಕೂಡ ನಾವು ಸಹಕರಿಸುತ್ತಿದ್ದೇವೆ. ಎರಡು ದೇಶಗಳು ಒಂದಾಗಿ ಅದೃಶ್ಯವಾಗಿರುವ ಶತ್ರುವನ್ನು ಸೋಲಿಸುತ್ತೇವೆ ಎಂದಿದ್ದಾರೆ.
ಮಾಹಾಮಾರಿ ಕೋವಿಡ್ 19 ವೈರಸ್ ಅನ್ನು ಹೊಡೆದೋಡಿಸಲು ಉಭಯ ರಾಷ್ಟ್ರಗಳು ಪಣತೊಟ್ಟಿವೆ. ಕೋವಿಡ್ 19 ಲಸಿಕೆ ಅಭಿವೃದ್ಧಿಪಡಿಸಲು ಅಮೆರಿಕಾ ಮತ್ತು ಭಾರತ ಒಟ್ಟಾಗಿವೆ ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Related Articles
ಈ ಹಿಂದೆ ಭಾರತವು ಮಲೇರಿಯಾ ರೋಗದ ವಿರುದ್ಧ ಬಳಸಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಅಮೆರಿಕಾಕ್ಕೆ ನೀಡಿತ್ತು. ಇದೀಗ ಅಮೆರಿಕಾವೂ ಭಾರತದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವೆಂಟಿಲೇಟರ್ ಗಳ ಸಹಾಯ ಮಾಡಲು ಮುಂದಾಗಿವೆ.
ಅಮೆರಿಕಾವು ಕೋವಿಡ್ 19 ವೈರಸ್ ಗೆ ಅತೀ ಹೆಚ್ಚಿನ ಸಂಖ್ಯೆಯ ಸಾವುನೋವುಗಳನ್ನು ಕಂಡ ದೇಶವಾಗಿದೆ. ಇಲ್ಲಿಯವರೆಗೂ ಸುಮಾರು 87,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು ಮತ್ತು 14 ಲಕ್ಷಕ್ಕಿಂತಲೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ.
ಭಾರತದಲ್ಲಿ ಕೂಡ ಈ ವೈರಸ್ ತನ್ನ ಪ್ರತಾಪವನ್ನು ತೋರಿಸುತ್ತಿದ್ದು 81,500 ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ. 2,648 ಜನರು ಮೃತಪಟ್ಟಿದ್ದಾರೆ. ಜಾಗತಿಕವಾಗಿ ಚೀನಾದ ವುಹಾನ್‌ನಲ್ಲಿ ಹುಟ್ಟಿದ ಈ ಕಾಯಿಲೆಯಿಂದ 3 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.