Advertisement

ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ : ಪಾಕ್‌ಗೆ ಕಮಲಾ  ತಾಕೀತು

11:14 PM Sep 24, 2021 | Team Udayavani |

ವಾಷಿಂಗ್ಟನ್: ಜಗತ್ತಿನಾದ್ಯಂತ ಪ್ರಜಾಸತ್ತೆಗೆ  ಎದುರಾಗಿರುವ ಅಪಾಯ, ಉಗ್ರರಿಗೆ ಪಾಕಿಸ್ಥಾನದ ಆಶ್ರಯ, ಅಫ್ಘಾನಿಸ್ಥಾನದ ಪರಿಸ್ಥಿತಿ, ಭಾರತ-ಅಮೆರಿಕ ವ್ಯೂಹಾತ್ಮಕ ಪಾಲುದಾರಿಕೆ…

Advertisement

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಸ್ತಾವವಾದ  ವಿಚಾರಗಳಿವು.

ಎರಡೂ ದೇಶಗಳ ಹಿತಾಸಕ್ತಿಗೆ ಸಂಬಂಧ ಹೊಂದಿರುವ ಜಾಗತಿಕ ವಿಚಾರಗಳ ಕುರಿತು ಇಬ್ಬರೂ ಶ್ವೇತಭವನದಲ್ಲಿ ಸುದೀರ್ಘ‌ ಮಾತುಕತೆ ನಡೆಸಿದ್ದಾರೆ. ಮೋದಿ ಜತೆಗಿನ ಚೊಚ್ಚಲ ಭೇಟಿ ವೇಳೆ “ಭಯೋತ್ಪಾದನೆಯಲ್ಲಿ ಪಾಕಿಸ್ಥಾನದ ಪಾತ್ರ’ದ ಕುರಿತು ಸ್ವಯಂಪ್ರೇರಿತರಾಗಿ ಮಾತನಾಡಿದ ಕಮಲಾ, “ಪಾಕಿಸ್ಥಾನವು ಹಲವು ಉಗ್ರ ಸಂಘಟನೆಗಳಿಗೆ ಆಶ್ರಯ ತಾಣವಾಗಿದ್ದು, ಆ ಸಂಘಟನೆಗಳಿಂದ ಭಾರತ ಮತ್ತು ಅಮೆರಿಕದ ಭದ್ರತೆಗೆ ಅಪಾಯವಾಗದಂತೆ ಕೂಡಲೇ ಅವುಗಳ ವಿರುದ್ಧ ಪಾಕಿಸ್ಥಾನವು ಕ್ರಮ ಕೈಗೊಳ್ಳಬೇಕು’ ಎಂದು ಪಾಕ್‌ಗೆ ತಾಕೀತು ಮಾಡಿದ್ದಾರೆ.

ಪ್ರಜಾಸತ್ತೆಗೆ ಅಪಾಯ: ಜಗತ್ತಿನಾದ್ಯಂತ ಇರುವ ಪ್ರಜಾಸತ್ತೆಗಳಿಗೆ ಅಪಾಯ ಎದುರಾಗಿರುವ ಕುರಿತು ಪ್ರಸ್ತಾಪಿಸಿದ ಕಮಲಾ, ನಾವು ನಮ್ಮ ನಮ್ಮ ದೇಶಗಳಲ್ಲಿ ಪ್ರಜಾಸತ್ತಾತ್ಮಕ ತತ್ವಗಳು ಹಾಗೂ ಸಂಸ್ಥೆಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದ ನಾಗರಿಕರ ಹಿತದೃಷ್ಟಿಯಿಂದ ಪ್ರಜಾಪ್ರಭುತ್ವಗಳನ್ನು ಬಲಿಷ್ಠಗೊಳಿಸಬೇಕಾದ ಅನಿವಾರ್ಯತೆಯಿದೆ ಎಂದೂ ಹೇಳಿದ್ದಾರೆ.

ಆಸ್ಟ್ರೇಲಿಯಾ, ಜಪಾನ್ ಪಿಎಂಗಳೊಂದಿಗೆ ಚರ್ಚೆ: ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು  ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ಜಪಾನ್‌ ಪ್ರಧಾನಿ ಯೊಶಿಹಿಡೆ ಸುಗಾ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ವಿಶ್ವಾಸಾರ್ಹ ಬಾಂಧವ್ಯ, ತಂತ್ರಜ್ಞಾನಗಳ ವಿನಿಮಯ, ಉತ್ಪಾದನೆ ಮತ್ತು ಕೌಶಲಾಭಿವೃದ್ಧಿಯಲ್ಲಿ ಹೊಸ ಪಾಲುದಾರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.

Advertisement

ಭಾರತ ನಿಮಗಾಗಿ ಕಾಯುತ್ತಿದೆ… :

ಕಮಲಾ ಅವರು “ಜಗತ್ತಿನ ಅನೇಕರಿಗೆ ಸ್ಫೂರ್ತಿಯ ಸೆಲೆ’ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯ ವೇಳೆ ಮೋದಿ ಈ ಮಾತುಗಳನ್ನಾಡಿದ್ದಾರೆ. “ನೀವು ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಐತಿಹಾಸಿಕ ವಿಚಾರ. ಅಧ್ಯಕ್ಷ ಬೈಡೆನ್‌ ಹಾಗೂ ನಿಮ್ಮ ನಾಯಕತ್ವದಡಿ ಭಾರತ ಮತ್ತು ಅಮೆರಿಕದ ಸಂಬಂಧವು ಇನ್ನಷ್ಟು ಎತ್ತರಕ್ಕೇರಲಿ ಎಂದು ನಾನು ಬಯಸುತ್ತೇನೆ’ ಎಂದೂ ಮೋದಿ ಹೇಳಿದ್ದಾರೆ. ಜತೆಗೆ “ಭಾರತವು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದೆ. ನೀವು ಮತ್ತು ನಿಮ್ಮ ಪತಿ ಡಗ್ಲಾಸ್‌ ಎಮೊØàಫ್ ಅವರು ಭಾರತಕ್ಕೆ ಭೇಟಿ ನೀಡಬೇಕೆಂದು ನಾನು ಈ ಮೂಲಕ ಆಮಂತ್ರಿಸುತ್ತಿದ್ದೇನೆ’ ಎಂದೂ ಮೋದಿ ಹೇಳಿದ್ದಾರೆ.

ಕಮಲಾ, ಮಾರಿಸನ್, ಸುಗಾಗೆ ಮೋದಿ ವಿಶೇಷ ಗಿಫ್ಟ್ :

ಪ್ರಧಾನಿ ಮೋದಿ ಅವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, ಜಪಾನ್‌ ಪ್ರಧಾನಿ ಯೋಶಿಹಿಡೆ ಸುಗಾ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಕಮಲಾ ಅವರ ತಾತ ಪಿ.ವಿ. ಗೋಪಾಲನ್‌ ಅವರು ಭಾರತ ಸರಕಾರದ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಅವರಿಗೆ ಸಂಬಂಧಿಸಿದ ಹಳೆಯ ನೋಟಿಫಿಕೇಶನ್‌ನ ಪ್ರತಿಯನ್ನು ಮರದ ಕೆತ್ತನೆಯುಳ್ಳ ಫ್ರೆàಮ್‌ಗೆ ಅಳವಡಿಸಿ ವಿಶೇಷ ಸ್ಮರಣಿಕೆಯನ್ನಾಗಿಸಿ ಕಮಲಾರಿಗೆ ಗಿಫ್ಟ್ ಕೊಟ್ಟಿದ್ದಾರೆ ಮೋದಿ. ಅದರ ಜತೆಗೆ “ಗುಲಾಬಿ ಮೀನಕಾರಿ ಚೆಸ್‌ ಸೆಟ್‌’ ಅನ್ನೂ ಉಡುಗೊರೆಯನ್ನಾಗಿ ನೀಡಿದ್ದಾರೆ. ಇನ್ನು, ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್‌ಗೆ ಜಗತ್ತಿನ ಅತಿ ಪುರಾತನ ನಗರಗಳಲ್ಲಿ ಒಂದಾದ ಕಾಶಿಯ ವೈಭವವನ್ನು ಪ್ರತಿಬಿಂಬಿಸುವ ಬೆಳ್ಳಿಯ ಗುಲಾಬಿ ಮೀನಕಾರಿ ನೌಕೆಯ ಪ್ರತಿಕೃತಿಯನ್ನು ನೀಡಲಾಗಿದೆ. ಜಪಾನ್‌ ಪ್ರಧಾನಿ ಸುಗಾ ಅವರಿಗೆ ಚಂದನದ ಬುದ್ಧನ ಪ್ರತಿಮೆಯನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next