ಟೆಹರಾನ್ : ಅಮೆರಿಕದ ಬೇಹು ಡ್ರೋನ್ ವಿಮಾನ ಇರಾನ್ ವಾಯು ಕ್ಷೇತ್ರದ ಉಲ್ಲಂಘನೆಗೈದಿರುವ ಕಾರಣ ಅದನ್ನು ತಾನು ಹೊಡೆದುರುಳಿಸಿರುವುದಾಗಿ ಇರಾನಿನ ರೆವಲ್ಯೂಶನರಿ ಗಾರ್ಡ್ ಇಂದು ಗುರುವಾರ ಹೇಳಿಕೊಂಡಿದೆ.
ಅಮೆರಿಕ ನಿರ್ಮಿತ ಗ್ಲೋಬಲ್ ಹಾಕ್ ಕಣ್ಗಾವಲು ಡ್ರೋನ್ ವಿಮಾನವನ್ನು ಇರಾನ್ ವಾಯು ಪಡೆ ಹೋರ್ಮೋಝ್ಗಾನ ಕರಾವಳಿ ಪ್ರಾಂತ್ಯದಲ್ಲಿ ಇರಾನ್ ವಾಯು ಪಡೆ ಹೊಡೆದುರುಳಿಸಿರುವುದಾಗಿ ವರದಿಗಳು ತಿಳಿಸಿವೆ. ಈ ಡ್ರೋನ್ ವಿಮಾನವನ್ನು ಅಮೆರಿಕದ ಆರ್‌ಕ್ಯೂ-4 ಗ್ಲೋಬಲ್ ಹಾಕ್ ಎಂದು ಇರಾನ್ ಗುರುತಿಸಿದೆ.
ಹಾಗಿದ್ದರೂ ಅಮೆರಿಕ ಈ ವರದಿಯನ್ನು ತಿರಸ್ಕರಿಸಿದೆ. ಇರಾನ್ ವಾಯು ಕ್ಷೇತ್ರದಲ್ಲಿ ಅಮೆರಿಕದ ಯಾವುದೇ ವಿಮಾನ ಇಂದು ಹಾರಾಟ ಮಾಡಿಲ್ಲ ಎಂದು ಅಮೆರಿಕದ ಮಿಲಿಟರಿ ಸೆಂಟ್ರಲ್ ಕಮಾಂಡ್‌ನ ವಕ್ತಾರರಾಗಿರುವ ನೇವಿ ಕ್ಯಾಪ್ಟನ್ ಬಿಲ್ ಅರ್ಬನ್ ನಿನ್ನೆ ಬುಧವಾರ ಮಧ್ಯರಾತ್ರಿಗೆ ಸ್ವಲ್ಪ ಮುನ್ನ ಹೇಳಿರುವುದು ವರದಿಯಾಗಿದೆ.
ಕಳೆದ ವಾರ ಇರಾನ್ ತನ್ನ ಡ್ರೋನ್ ಅನ್ನು ಹೊಡೆದುರುಳಿಸಲು ಯತ್ನಿಸಿತ್ತು ಎಂದು ಅಮೆರಿಕ ಹೇಳಿತ್ತು. ಜತೆಗೆ ಇರಾನ್ ಜತೆಗೆ ಮೈತ್ರಿ ಹೊಂದಿರುವ ಯೆಮೆನ್‌ನ ಹುತಿ ಪಡೆಗಳು ತನ್ನ ಡ್ರೋನ್ ಒಂದನ್ನು ಯಶಸ್ವಿಯಾಗಿ ಹೊಡೆದುರುಳಿಸಿದ್ದವು ಎಂದು ಅಮೆರಿಕ ಹೇಳಿತ್ತು.
ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಈಚಿನ ವರ್ಷಗಳಲ್ಲಿ ತೀವ್ರವಾಗಿ ಹದಗೆಟ್ಟಿದ್ದು ಅಮೆರಿಕ ಹೇರಿರುವ ನಿಷೇಧಗಳು ಇರಾನ್ ಆರ್ಥಿಕತೆಗೆ ಬಲವಾದ ಪೆಟ್ಟು ಕೊಟ್ಟಿವೆ.