ವಾಷಿಂಗ್ಟನ್: ಕೋವಿಡ್ ಮಹಾಮಾರಿಗೆ ಅಮೆರಿಕಾ ನಲುಗಿಹೋಗಿದ್ದು ಕಳೆದ 24 ಗಂಟೆಗಳ ಅಧಿಯಲ್ಲಿ ಸುಮಾರು 55 ಸಾವಿರ ಜನರಿಗೆ ಸೊಂಕು ತಗುಲಿದೆ ಎಂದು ವರದಿಯಾಗಿದೆ. ವೈರಾಣು ಕಾಣಿಸಿಕೊಂಡಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಜನರು ವೈರಸ್ ಗೆ ಭಾಧಿತರಾಗಿದ್ದಾರೆಂದು ರಾಯಿಟರ್ಸ್ ವರದಿ ತಿಳಿಸಿದೆ.
ಈ ಮೊದಲು ಬ್ರೆಜಿಲ್ ನಲ್ಲಿ 54,771 ಜನರಿಗೆ ಒಂದೇ ದಿನದಲ್ಲಿ ಸೋಂಕು ತಗುಲಿದ್ದು ಈವರೆಗಿನ ದಾಖಲೆಯಾಗಿತ್ತು. ಎರಡು ವಾರಗಳ ಹಿಂದೆ ಅಮೆರಿಕಾದಲ್ಲಿ ದಿನವೊಂದಕ್ಕೆ 22 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೇ ಕಳೆದ ಮೂರು ದಿನಗಳಿಂದ 40 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಆತಂಕವನ್ನು ಹೆಚ್ಚು ಮಾಡಿದೆ.
ರಾಯಿಟರ್ಸ್ ವಿಶ್ಲೇಷಣೆಯ ಪ್ರಕಾರ, ಜೂನ್ ಆರಂಭದ ಎರಡು ವಾರಗಳಿಗೆ ಹೋಲಿಸಿದರೆ ಕಳೆದ 14 ದಿನಗಳಲ್ಲಿ ಅಮೆರಿಕಾದ 50 ರಾಜ್ಯಗಳಲ್ಲಿ 37% ರಷ್ಟು ಹೊಸ ಸೋಂಕು ಪ್ರಕರಣಗಳು ಏರಿಕೆಯಾಗಿದೆ.ಪ್ಲೋರಿಡಾ ವೊಂದರಲ್ಲೇ ಪ್ರತಿನಿತ್ಯ 10 ಸಾವಿರ ಜನರು ಸೋಂಕಿಗೆ ತುತ್ತಾಗುತ್ತಿದ್ದು, ಇಲ್ಲಿ 21 ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ನಾಗರೀಕರು ಮಾಸ್ಕ್ ಧರಿಸದೇ ಇರುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದೇ ಇರುವುದು ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.
ದೇಶದ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಲಾಕ್’ಡೌನ್ ತೆರವಿನ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಇದೀಗ ಯುವ ವಯಸ್ಕರಲ್ಲೇ ಹೆಚ್ಚಿನ ಕೇಸು ದಾಖಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಪ್ರತಿನಿತ್ಯ 1 ಲಕ್ಷ ಜನರಿಗೆ ಸೋಂಕು ತಗಲುವ ಸಾಧ್ಯತೆ ದಟ್ಟವಾಗಿದೆ. ಕೂಡಲೇ ಸಮರ್ಪಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಎಚ್ಚರಿಸಿದ್ದಾರೆ.
ಅಮೆರಿಕಾದಲ್ಲಿ ಕೋವಿಡ್ ಪರೀಕ್ಷೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದು, ಪಾಸಿಟಿವ್ ವರದಿಗಳು ನಿರಂತರವಾಗಿ ಬರುತ್ತಿದೆ. ಈಗಾಗಲೇ ಈ ರಾಷ್ಟ್ರದಲ್ಲಿ 28 ಲಕ್ಷಕ್ಕಿಂತ ಹೆಚ್ಚಿನ ಜನರು ಸೋಂಕಿಗೆ ಒಳಗಾಗಿದ್ದು, 1.31 ಲಕ್ಷ ಜನರು ಸಾವನ್ನಪ್ಪಿದ್ದಾರೆ.