ವಾಷಿಂಗ್ಟನ್ : ಅಮೆರಿಕದ 45 ನೇ ಅಧ್ಯಕ್ಷರಾಗಿ ಇಂದು ಶುಕ್ರವಾರ ರಾತ್ರಿ 10.30 ನಡೆಯುವ ರಿಪಬ್ಲಿಕನ್ ಪಕ್ಷದ ಮುಖಂಡ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 9 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ.
ಕಳೆದ ವರ್ಷ ನವೆಂಬರ್ 8ರಂದು ಟ್ರಂಪ ಅವರ ಭರ್ಜರಿ ವಿಜಯ ದಾಖಲಾದಂದಿನಿಂದ ಅಮೆರಿಕದ ಶೇರು ಮಾರುಕಟ್ಟೆ ಇಂದು ಶುಕ್ರವಾರ ಶೇ.5.8ರಷ್ಟು ಏರಿದೆ.
“ಅಮೆರಿಕವನ್ನು ಮತ್ತೂಮ್ಮೆ ಉನ್ನತಕ್ಕೆ ಏರಿಸೋಣ’ ಎಂಬ ಉದ್ಘೋಷದಲ್ಲಿ ಸಮಾರಂಭ ಆಯೋಜನೆಗೊಂಡಿದೆ. ಟ್ರಂಪ್ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಬಳಸಿ ಬೈಬಲ್ ಅನ್ನು ಹಾಗೂ ಕಾಲೇಜು ದಿನಗಳಲ್ಲಿ ಪದವಿ ಮುಗಿಸಿದಾಗ ಅವರ ತಾಯಿ ನೀಡಿದ ಬೈಬಲ್ ಬಳಸಲಿದ್ದಾರೆ.
ಸಮಾರಂಭದಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿಶ್ವದ ಗಣ್ಯಾತಿಗಣ್ಯರು, ಸಹಸ್ರಾರು ಭಾರತೀಯರು ಪಾಲ್ಗೊಳ್ಳಲಿದ್ದಾರೆ.
ಟ್ರಂಪ್ ಅವರು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಮಣಿಸಿ ಅಧ್ಯಕ್ಷ ಹುದ್ದೆಗೆ ಏರುತ್ತಿದ್ದಾರೆ. ಇಸ್ಲಾಂ ವಿರೋಧಿ ನೀತಿ ಹಾಗೂ ವಲಸೆ ವಿರೋಧಿ ನೀತಿ ಹೊಂದಿರುವ ಅವರು ಬಲಪಂಥೀಯ ರಾಜಕಾರಣಿಯಾಗಿದ್ದು, ಯಾವ ರೀತಿ ಆಡಳಿತ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಭಾರಿ ಭದ್ರತೆ: ಟ್ರಂಪ್ ಪದಗ್ರಹಣ ಸಮಾರಂಭ ಹಿನ್ನೆಲೆಯಲ್ಲಿ ವಾಷಿಂಗ್ಟನ್ನಿನ ಸುತ್ತಮುತ್ತ 100 ವೃತ್ತಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. 2.7 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳು ಓಡಾಡುವಂತಿಲ್ಲ. ಅಮೆರಿಕ ಗುಪ್ತಚರ ಏಜೆನ್ಸಿಯ 28 ಸಾವಿರ ಸಿಬ್ಬಂದಿ ಈಗಾಗಲೇ ಕರ್ತವ್ಯ ನಿರತರಾಗಿದ್ದಾರೆ.
40 ವಸ್ತುಗಳ ನಿಷೇಧ: ವಾಷಿಂಗ್ಟನ್ನಿನಲ್ಲಿ ನಡೆಯುವ ಸಮಾರಂಭಕ್ಕೆ ಕಾಲಿಡುವ ಮುನ್ನ ವೀಕ್ಷಕರು ಒಟ್ಟು 6 ಚೆಕ್‌ಪೋಸ್ಟ್‌ಗಳನ್ನು ದಾಟಬೇಕಾಗುತ್ತದೆ. ಬಲೂನ್, ಡ್ರಮ್, ಸೀಟಿ, ಸೆಲ್ಫಿ ಸ್ಟಿಕ್ಸ್, ಬ್ಯಾಗುಗಳು, ಚಾಕೊಲೆಟ್, ಗನ್ ಸೇರಿದಂತೆ ಸೇರಿದಂತೆ 40 ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ ಎಂಬ ಆದೇಶವೂ ಹೊರಬಿದ್ದಿದೆ.