ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮಧ್ಯಾಪ್ರಾಚ್ಯ ಪ್ರವಾಸ, ವಿಶೇಷವಾಗಿ ಇಸ್ರೇಲ್‌ಗೆ ಜು.13ರಿಂದ 16ರ ವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಅವರು ಇಸ್ರೇಲ್, ಯುಇಎ, ಭಾರತದ ಜತೆಗೆ ಮೊದಲ ಬಾರಿಗೆ ಆಯೋಜಿಸಲಾಗುವ ವರ್ಚುವಲ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ನಾಲ್ಕೂ ರಾಷ್ಟ್ರಗಳು ಒಗ್ಗೂಡಿ ಮೂಲ ಸೌಕರ್ಯ ಕ್ಷೇತ್ರ ಸೇರಿದಂತೆ ಹಲವು ವಿಭಾಗಗಳಲ್ಲಿ ಬಂಡವಾಳ ಹೂಡಿಕೆ, ಆಹಾರ ಭದ್ರತೆ, ರಕ್ಷಣೆಯ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
“ಐ2ಯು2′ ಎಂಬ ವಿಶೇಷ ಹೆಸರಿನ ಒಕ್ಕೂಟ ಇದಾಗಿದೆ. ಅದರಲ್ಲಿ ಅಮೆರಿಕ, ಯುಇಎ, ಭಾರತ, ಇಸ್ರೇಲ್ ಇವೆ. “ಐ’ ಎಂದರೆ ಇಸ್ರೇಲ್ ಮತ್ತು ಭಾರತ. “ಯು’ ಎಂದರೆ ಯುಎಇ ಮತ್ತು ಅಮೆರಿಕ. “ಐ’ ಮತ್ತು “ಯು’ ಎಂಬ ಅಕ್ಷರದ 2 ದೇಶಗಳು ಇರುವುದರಿಂದ “ಐ2ಯು2′ ಎಂದು ಒಕ್ಕೂಟಕ್ಕೆ ಹೆಸರು ನೀಡಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹೊಂದಿರುವ ಪ್ರಾಬಲ್ಯ ಗಮನಿಸಿ ಆ ದೇಶದಲ್ಲಿಯೇ ಸಮ್ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ. ನಾಲ್ಕೂ ದೇಶಗಳ ಮುಖ್ಯಸ್ಥರು ಸಮ್ಮೇಳನ ನಡೆಸುವುದು ಇದೇ ಮೊದಲ ಬಾರಿ. 2021ರ ಅಕ್ಟೋಬರ್‌ನಲ್ಲಿಯೇ ಭಾರತ, ಇಸ್ರೇಲ್, ಯುಎಇ, ಅಮೆರಿಕದ ವಿದೇಶಾಂಗ ಸಚಿವರು ಇಸ್ರೇಲ್‌ನಲ್ಲಿ ಮಾತುಕತೆ ನಡೆಸಿದ್ದರು. ಆಗ ಈ ಒಕ್ಕೂಟಕ್ಕೆ “ಪಶ್ಚಿಮ ವ್ಯಾಪ್ತಿಯ ಕ್ವಾಡ್’ ಎಂದು ಹೆಸರಿಸಲಾಗಿತ್ತು.