ಕೊಲೊರಾಡೋ: ಕೊಲೊರಾಡೋದ ಏರ್ ಫೋರ್ಸ್ ಅಕಾಡೆಮಿಯಲ್ಲಿ ವೇದಿಕೆಯ ಮೇಲೆ ಅಧ್ಯಕ್ಷ ಜೋ ಬಿಡೆನ್ ಮುಗ್ಗರಿಸಿ ಬಿದ್ದ ಘಟನೆ ಗುರುವಾರ ನಡೆದಿದೆ. ಅವರಿಗೆ ಯಾವುದೇ ಗಾಯವಾಗಿಲ್ಲ. ಅಲ್ಲದೆ ನಂತರ ಅದರ ಬಗ್ಗೆ ತಮಾಷೆ ಮಾಡಿದರು.
ಮಿಲಿಟರಿ ಅಕಾಡೆಮಿಯ ಪದವೀಧರರಿಗೆ ಪ್ರಾರಂಭದ ಭಾಷಣವನ್ನು ನೀಡಿದ 80 ವರ್ಷದ ಬಿಡೆನ್ ಅವರು ಕೆಡೆಟ್ ನೊಂದಿಗೆ ಕೈಕುಲುಕಿದರು ಮತ್ತು ತಮ್ಮ ಸ್ಥಾನಕ್ಕೆ ಹಿಂತಿರುಗಿದಾಗ ಅವರು ಎಡವಿ ಬಿದ್ದರು.
ಏರ್ ಫೋರ್ಸ್ ಸಿಬ್ಬಂದಿ ಅವರಿಗೆ ಮೇಲೇಳಲು ಮಾಡಲು ಸಹಾಯ ಮಾಡಿದರು. ಏಳುತ್ತಿದ್ದಂತೆ, ಬಿಡೆನ್ ತಾನು ಎಡವಿದ ವಸ್ತುವನ್ನು ತೋರಿಸಿದರು. ವೇದಿಕೆಯ ಮೇಲೆ ಒಂದು ಸಣ್ಣ ಕಪ್ಪು ಮರಳಿನ ಚೀಲದಂತಿನ ವಸ್ತುವನ್ನು ಇರಿಸಲಾಗಿತ್ತು.
ಶ್ವೇತಭವನದ ಕಮ್ಯುನಿಕೇಷನ್ಸ್ ನಿರ್ದೇಶಕ ಬೆನ್ ಲಾಬೋಲ್ಟ್ ಅವರು ಸ್ವಲ್ಪ ಸಮಯದ ನಂತರ “ಅವರು ಚೆನ್ನಾಗಿದ್ದಾರೆ. ಅವರು ಕೈಕುಲುಕುತ್ತಿರುವಾಗ ವೇದಿಕೆಯ ಮೇಲೆ ಮರಳಿನ ಚೀಲವಿತ್ತು” ಎಂದು ಟ್ವೀಟ್ ಮಾಡಿದ್ದಾರೆ.
ಏರ್ ಫೋರ್ಸ್ ಒನ್ ಮತ್ತು ಮೆರೈನ್ ಒನ್ ಮೂಲಕ ಶ್ವೇತಭವನಕ್ಕೆ ಹಿಂತಿರುಗಿದ ನಂತರ, ಬಿಡೆನ್ ಮತ್ತೊಂದು ಬಾರಿ ಎಡವಿದರು. ಅವರು ಹೆಲಿಕಾಪ್ಟರ್ ನಿಂದ ಇಳಿಯುವಾಗ ಬಾಗಿಲಿಗೆ ತಮ್ಮ ತಲೆಯನ್ನು ಹೊಡೆದುಕೊಂಡರು.