ವಾಷಿಂಗ್ಟನ್: ಚೀನದ ಕುತಂತ್ರವನ್ನು ಮಣಿಸಲು, ಭಾರತದ ಜತೆಗಿನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಲು ಬಯಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಔತಣಕೂಟಕ್ಕೆ ಆಹ್ವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕಗೆ ಔಪಚಾರಿಕ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಜೂನ್‌ನಲ್ಲಿ ಆಹ್ವಾನಿಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಇಂಡೋ-ಪೆಸಿಫಿಕ್ ಭದ್ರತೆಗೆ ಚೀನಾದಿಂದ ಎದುರಾಗುತ್ತಿರುವ ಗಂಭೀರ ಭದ್ರತಾ ಸಮಸ್ಯೆಗಳಿಗೆ ತಿರುಗೇಟು ನೀಡಲು ಭಾರತದ ಜತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಶ್ವೇತಭವನ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮಾತ್ರವಲ್ಲದೇ, ಇನ್ನೂ ಹಲವು ರಾಷ್ಟ್ರಗಳ ಜತೆಗಿನ ಸಂಬಂಧವನ್ನು ಅಮೆರಿಕ ಉತ್ತಮಗೊಳಿಸಿಕೊಳ್ಳಲು ಮುಂದಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರನ್ನು ಬೈಡನ್ ಆಹ್ವಾನಿಸಿದ್ದರು. ಮುಂದಿನ ತಿಂಗಳು ಅಂದರೆ ಏಪ್ರಿಲ್ 21ಕ್ಕೆ ದಕ್ಷಿಣ ಕೊರಿಯದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರನ್ನು ಆಹ್ವಾನಿಸಿದ್ದಾರೆ. ಬೈಡನ್ ಔತಣಕೂಟಕ್ಕೆ ಆಹ್ವಾನಿಸಲು ಯೋಜಿಸಿರುವ ಮೂರನೇ ನಾಯಕ ಪ್ರಧಾನಿ ಮೋದಿ ಎನ್ನಲಾಗಿದೆ.