Advertisement

ಯುಎಸ್‌ ಓಪನ್‌: ಮೂರಕ್ಕೇರಿದ ಜೊಕೋ, ಫೆಡರರ್‌

12:08 AM Aug 30, 2019 | Sriram |

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಭುಜದ ನೋವಿನ ನಡುವೆಯೂ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ 3ನೇ ಸುತ್ತು ಪ್ರವೇಶಿಸಿದ್ದಾರೆ. ಮತ್ತೋರ್ವ ನೆಚ್ಚಿನ ಆಟಗಾರ ರೋಜರ್‌ ಫೆಡರರ್‌, ಜಪಾನಿನ ಕೀ ನಿಶಿಕೊರಿ ಕೂಡ ಮುನ್ನಡೆ ಸಾಧಿಸಿದ್ದಾರೆ.

Advertisement

ಬುಧವಾರ ರಾತ್ರಿಯ ಮುಖಾಮುಖೀಗೆ ಮಳೆಯಿಂದ ಅಡಚಣೆಯಾಯಿತು. ಇದು ಜೊಕೋವಿಕ್‌ ಪಂದ್ಯದ ವೇಳೆಯೂ ಸುರಿಯಿತು. ಕೆಲವು ಬ್ರೇಕ್‌ಗಳ ಬಳಿಕ ಅಗ್ರ ಶ್ರೇಯಾಂಕದ ಜೊಕೋವಿಕ್‌ 6-4, 7-6 (7-3), 6-1 ಅಂತರದಿಂದ ಆರ್ಜೆಂಟೀನಾದ 56ನೇ ರ್‍ಯಾಂಕಿಂಗ್‌ ಟೆನಿಸಿಗ ಜುವಾನ್‌ ಇಗ್ನೇಶಿಯೊ ಲೊಂಡೆರೊ ಅವರನ್ನು ಮಣಿಸಿದರು.

ಫೆಡರರ್‌ 4 ಸೆಟ್‌ ಹೋರಾಟ
2008ರ ಬಳಿಕ ಮೊದಲ ಸಲ ಯುಎಸ್‌ ಓಪನ್‌ ಪ್ರಶಸ್ತಿ ಗೆಲ್ಲಲು ಹವಣಿಸುತ್ತಿರುವ 38ರ ಹರೆಯದ ರೋಜರ್‌ ಫೆಡರರ್‌ ಬೋಸ್ನಿಯಾದ ದಮಿರ್‌ ಜುಮುರ್‌ ಅವರನ್ನು 4 ಸೆಟ್‌ಗಳ ಕಾದಾಟದ ಬಳಿಕ 3-6, 6-2, 6-3, 6-4ರಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅವರು ಫ್ರಾನ್ಸ್‌ನ ಲುಕಾಸ್‌ ಪೌಲಿ ಅಥವಾ ಬ್ರಿಟನ್ನಿನ ಡ್ಯಾನ್‌ ಇವಾನ್ಸ್‌ ವಿರುದ್ಧ ಆಡಲಿದ್ದಾರೆ.

ಉಳಿದ ಪ್ರಮುಖ ಪಂದ್ಯಗಳಲ್ಲಿ ಜಪಾನಿನ ಕೀ ನಿಶಿಕೊರಿ ಆತಿಥೇಯ ದೇಶದ ಬ್ರಾಡ್ಲಿ ಕ್ಲಾನ್‌ ಅವರನ್ನು 6-2, 4-6, 6-3, 7-5 ಅಂತರದಿಂದ; ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ 12ನೇ ಶ್ರೇಯಾಂಕದ ಕ್ರೊವೇಶಿಯನ್‌ ಆಟಗಾರ ಕೊರಿಕ್‌ ವಿರುದ್ಧ ವಾಕ್‌ಓವರ್‌ ಪಡೆದರು.

ಜೊಕೋಗೆ ಭುಜದ ನೋವು
ಪಂದ್ಯದ ನಡುವೆ ಜೊಕೋವಿಕ್‌ ಎಡ ಭುಜದ ನೋವಿಗೆ ಒಳಗಾದರು. ಚಿಕಿತ್ಸೆ ಬಳಿಕ ಆಟ ಮುಂದುವರಿಸಿದರು. “ಇದರಿಂದ ನನ್ನ ಸರ್ವ್‌ ಮತ್ತು ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೆ ತೀವ್ರ ತೊಂದರೆಯಾಯಿತು. ಈ ನೋವಿನಿಂದ ಆಡುವುದು ಸುಲಭವಲ್ಲ’ ಎಂದು ಜೊಕೋ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.

Advertisement

ಜೊಕೋವಿಕ್‌ ಅವರಿನ್ನು ತಮ್ಮದೇ ದೇಶದ ದುಸಾನ್‌ ಲಾಜೋವಿಕ್‌ ಅಥವಾ ಅಮೆರಿಕದ ಡೆನ್ನಿಸ್‌ ಕುಡ್ಲ ಸವಾಲನ್ನು ಎದುರಿಸಬೇಕಿದೆ. ಆದರೆ ಜೊಕೋ ಸ್ಥಿತಿಯನ್ನು ಗಮನಿಸಿದರೆ ಅವರು ಪ್ರಶಸ್ತಿ ಉಳಿಸಿಕೊಳ್ಳುವುದು ಕಠಿನವೆಂದೇ ಭಾವಿಸಲಾಗಿದೆ. ಅವರ ಮುಂದಿನ ಪಂದ್ಯಕ್ಕೆ ಒಟ್ಟು 48 ಗಂಟೆಗಳ ಸಮಯವಿದ್ದು, ಅಷ್ಟರಲ್ಲಿ ಜೊಕೋ ಫಿಟ್‌ನೆಸ್‌ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

ಸೆರೆನಾಗೆ ಜಯ, ವೀನಸ್‌ಗೆ ಸೋಲು
ವನಿತಾ ಸಿಂಗಲ್ಸ್‌ನಲ್ಲಿ ವಿಲಿಯಮ್ಸ್‌ ಸೋದರಿಯರಿಗೆ ಮಿಶ್ರಫ‌ಲ ಲಭಿಸಿದೆ. ಸೆರೆನಾ 3ನೇ ಸುತ್ತು ತಲುಪಿದರೆ, ಅಕ್ಕ ವೀನಸ್‌ ಕೂಟದಿಂದ ನಿರ್ಗಮಿಸಿದ್ದಾರೆ. ದ್ವಿತೀಯ ಸುತ್ತು ದಾಟಿದ ಇತರ ಪ್ರಮುಖರೆಂದರೆ ಕ್ಯಾರೋಲಿನಾ ಪ್ಲಿಸ್ಕೋವಾ, ಮ್ಯಾಡಿಸನ್‌ ಕೀಸ್‌, ಆ್ಯಶ್ಲಿ ಬಾರ್ಟಿ ಮತ್ತು ಎಲಿನಾ ಸ್ವಿಟೋಲಿನಾ.

ಸೆರೆನಾ ತಮ್ಮದೇ ದೇಶದ ಕ್ಯಾಥರಿನ್‌ ಮೆಕ್‌ನಾಲಿ ವಿರುದ್ಧ 5-7, 6-3, 6-1ರಿಂದ ಕಠಿನ ಗೆಲುವು ಸಾಧಿಸಿದರು. ವೀನಸ್‌ ಅವರನ್ನು ಉಕ್ರೇನಿನ ಎಲಿನಾ ಸ್ವಿಟೋಲಿನಾ 6-4, 6-4ರಿಂದ ಮಣಿಸಿದರು.

ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಜಾರ್ಜಿಯಾದ ಮರಿಯಮ್‌ ಬೊಕವೇಜ್‌ ಅವರನ್ನು 6-1, 6-4ರಿಂದ; ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಅಮೆರಿಕದ ಲಾರೆನ್‌ ಡೇವಿಸ್‌ ಅವರನ್ನು 6-2, 7-6 (7-2) ಅಂತರದಿಂದ; ಅಮೆರಿಕದ ಮ್ಯಾಡಿಸನ್‌ ಕೀಸ್‌ ಚೀನದ ಲಿನ್‌ ಜು ಅವರನ್ನು 6-4, 6-1 ಅಂತರದಿಂದ ಹಿಮ್ಮೆಟ್ಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next