Advertisement

ಯುಎಸ್‌ ಓಪನ್‌: 4ನೇ ಸುತ್ತಿಗೇರಿದ ಒಸಾಕಾ

11:51 PM Sep 01, 2019 | Sriram |

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌ ಜಪಾನಿನ ನವೋಮಿ ಒಸಾಕಾ ಭರ್ಜರಿ ಆಟವಾಡಿ ಅಮೆರಿಕದ 15ರ ಹರೆಯದ ಸೆನ್ಸೇಶನ್‌ ಕೊಕೊ ಗಾಫ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಯುಎಸ್‌ ಓಪನ್‌ ಟೆನಿಸ್‌ ಕೂಟದ ಅಂತಿಮ 16ರ ಸುತ್ತಿಗೇರಿದರು.

Advertisement

ಆರ್ಥರ್‌ ಆ್ಯಶೆ ಕ್ರೀಡಾಂಗಣದಲ್ಲಿ ನಡೆದ ಈ ಸೆಣಸಾಟದಲ್ಲಿ ಒಸಾಕಾ ಅವರ ಬಿರುಗಾಳಿಯ ಆಟಕ್ಕೆ ತಡೆಯೊಡ್ಡಲು ಗಾಫ್ಗೆ ಸಾಧ್ಯವಾಗಲಿಲ್ಲ. 6-3, 6-0 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿದ ಒಸಾಕಾ ನಾಲ್ಕನೇ ಸುತ್ತಿಗೇರಿದರು. ಮುಂದಿನ ಸುತ್ತಿನಲ್ಲಿ ಅವರು ಸ್ವಿಸ್‌ನ 13ನೇ ಶ್ರೇಯಾಂಕದ ಬೆಲಿಂಡಾ ಬೆನ್ಸಿಕ್‌ ಅವರನ್ನು ಎದುರಿಸಲಿದ್ದಾರೆ.

21ರ ಹರೆಯದ ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿರುವ ಒಸಾಕಾ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದರು. ಭಾವನಾತ್ಮಕ ಹೋರಾಟದ ಬಳಿಕ ಸಂದರ್ಶನದ ವೇಳೆ ತನ್ನ ಜತೆ ಸೇರಿಕೊಳ್ಳುವಂತೆ ಗಾಫ್ ಅವರನ್ನು ಒಸಾಕಾ ಕೇಳಿಕೊಂಡರು. ಆದರೆ ಇದಕ್ಕೆ ಗಾಫ್ ಬೇಡ ಎಂದರು. ಯಾಕೆಂದರೆ ನಾನು ಎಲ್ಲ ಸಮಯ ಅಳುತ್ತ ಇರಬೇಕಾಗುತ್ತದೆ ಎದು ಗಾಫ್ ಹೇಳಿದ್ದರು.

ಅಜೆರೆಂಕಾಗೆ ಸೋಲು
19ನೇ ಶ್ರೇಯಾಂಕದ ಕ್ಯಾರೋಲಿನಾ ಅಜೆರೆಂಕಾ ನೇರ ಸೆಟ್‌ಗಳಲ್ಲಿ ಆಘಾತಕಾರಿ ಸೋಲು ಕಂಡಿದ್ದಾರೆ. ಅವರನ್ನು 6-4, 6-4 ನೇರ ಸೆಟ್‌ಗಳಿಂದ ಉರುಳಿಸಿದ 15ನೇ ಶ್ರೇಯಾಂಕದ ಕೆನಡದ ಬಿಯಾಂಕಾ ಆ್ಯಂಡ್ರೀಸ್ಕಾ ನಾಲ್ಕನೇ ಸುತ್ತಿಗೆ ತಲುಪಿದರು. ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಜೂಲಯಾ ಜಾರ್ಜಸ್‌ ಸುಲಭವಾಗಿ ಕಿಕಿ ಬರ್ಟೆನ್ಸ್‌ ಅವರನ್ನು ಮಣಿಸಿದರು. 6-2, 6-3 ಸೆಟ್‌ಗಳಿಂದ ಗೆದ್ದ ಜಾರ್ಜಸ್‌ ಮುಂದಿನ ಸುತ್ತಿಗೇರಿದರು.

ನಾಲ್ಕನೇ ಸುತ್ತಿನಲ್ಲಿ ಒಸಾಕಾ ಅವರನ್ನು ಎದುರಿಸಲಿರುವ ಬೆನ್ಸಿಕ್‌ ತನ್ನ ಪಂದ್ಯದಲ್ಲಿ ಎದುರಾಳಿ ಕೊಂಟವೈಟ್‌ ಆಡದ ಕಾರಣ ವಾಕ್‌ಓವರ್‌ ಪಡೆದರು. ಇನ್ನೊಂದು ಪಂದ್ಯದಲ್ಲಿ ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್‌ ಅವರು ಜರ್ಮನಿಯ ಆಂದ್ರೆ ಪೆಟ್ಕೊವಿಕ್‌ ಅವರನ್ನು 6-3, 6-3 ಸೆಟ್‌ಗಳಿಂದ ಮಣಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next