ನ್ಯೂಯಾರ್ಕ್: ಯುಎಸ್ ಓಪನ್ ಟೆನಿಸ್‌ನಲ್ಲಿ ತಾರಾ ಆಟಗಾರರ ಓಟ ಮುಂದುವರಿದಿದೆ. ಸ್ಟೆ ಫಾನಸ್ ಸಿಸಿಪಸ್, ಡ್ಯಾನಿಲ್ ಮೆಡ್ವೆಡೆವ್, ಡೀಗೊ ಶಾರ್ಟ್ಸ್ಮನ್, ಸಿಮೋನಾ ಹಾಲೆಪ್, ಸ್ಲೋನ್ ಸ್ಟೀಫನ್ಸ್ ಮೊದಲಾದವರೆಲ್ಲ ಯಶಸ್ವಿಯಾಗಿ 3ನೇ ಸುತ್ತು ತಲುಪಿದ್ದಾರೆ. ಹಾಲಿ ಚಾಂಪಿಯನ್ ನವೋಮಿ ಒಸಾಕಾಗೆ ವಾಕ್ ಓವರ್ ಲಭಿಸಿದೆ.
ಮೊದಲ ಸುತ್ತಿನಲ್ಲೇ ಆ್ಯಂಡಿ ಮರ್ರೆ ಅವರನ್ನು ಮನೆಗೆ ಕಳುಹಿಸಿದ ಸಿಸಿಪಸ್ ಫ್ರಾನ್ಸ್‌ನ ಅಡ್ರಿಯನ್ ಮನ್ನಾರಿನೊ ಅವರನ್ನು 6-3, 6-4, 6-7 (4-7), 6-0 ಅಂತರದಿಂದ ಪರಾಭವಗೊಳಿಸಿದರು. ಈ ಪಂದ್ಯದಲ್ಲಿ ಸಿಸಿಪಸ್ 23 ಏಸ್ ಸಿಡಿಸಿದ್ದೊಂದು ದಾಖಲೆ.
ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಜರ್ಮನಿಯ ಡೊಮಿನಿಕ್ ಕೋಫರ್ ಅವರನ್ನು 6-4, 6-1, 6-2 ನೇರ ಸೆಟ್‌ಗಳಿಂದ ಮಣಿಸಿದರು. ಸ್ಪೇನಿನ ಪಾಬ್ಲೊ ಆ್ಯಂಡುಜರ್ ವಿರುದ್ಧ ಮೆಡ್ವೆಡೇವ್ 3ನೇ ಸುತ್ತಿನ ಪಂದ್ಯವಾಡಲಿದ್ದಾರೆ. ದಕ್ಷಿಣ ಆಫ್ರಿಕಾದ ಬಿಗ್ ಸರ್ವರ್ ಕೆವಿನ್ ಆ್ಯಂಡರ್ಸನ್ ಸವಾಲನ್ನು ಮೆಟ್ಟಿ ನಿಂತ ಅರ್ಜೆಂಟೀನದ ಡೀಗೊ ಶಾರ್ಟ್ಸ್ಮನ್ 7-6 (7-4), 6-3, 6-4 ಅಂತರದಿಂದ ಗೆದ್ದು ಬಂದರು.
ಆಲ್ ಅಮೆರಿಕನ್ ಫೈಟ್: ವನಿತೆಯರ “ಆಲ್ ಅಮೆರಿಕನ್’ ಹೋರಾಟದಲ್ಲಿ 2017ರ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ 6-4, 6-2ರಿಂದ 17ರ ಯುವ ಆಟಗಾರ್ತಿ ಕೊಕೊ ಗಾಫ್ ಅವರನ್ನು ಪರಾಭವಗೊಳಿಸಿದರು.
ವಿಶ್ವದ ನಂ.2 ಆಟಗಾರ್ತಿ ಅರಿನಾ ಸಬಲೆಂಕಾ ಸ್ಲೊವೇನಿಯದ ತಮಾರಾ ಜಿದಾನ್ಸೆಕ್ ವಿರುದ್ಧ 6-3, 6-1 ಅಂತರದ ಸುಲಭ ಜಯ ಸಾಧಿಸಿದರು. ಇವರ ಮುಂದಿನ ಎದುರಾಳಿ ಅಮೆರಿಕದ ಡ್ಯಾನಿಯಲ್ ಕಾಲಿನ್ಸ್. ಸಿಮೋನಾ ಹಾಲೆಪ್-ಕ್ರಿಸ್ಟಿನಾ ಕುಕೋವಾ ನಡುವಿನ ಪಂದ್ಯಕ್ಕೆ ಮಳೆಯ ಕಾಟ ಎದುರಾಯಿತು. ಬಳಿಕ ಇದನ್ನು “ಅರ್ಥರ್ ಆ್ಯಶ್ ಸ್ಟೇಡಿಯಂ’ಗೆ ಸ್ಥಳಾಂತರಿಸಲಾಯಿತು. ಇದನ್ನು ಹಾಲೆಪ್ 6-3, 6-1 ಅಂತರದಿಂದ ಗೆದ್ದರು.
ನವೋಮಿ ಒಸಾಕಾ ಎದುರಾಳಿ, ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ಅನಾರೋಗ್ಯದಿಂದ ಆಡಲಿಳಿಯಲಿಲ್ಲ. ಹೀಗಾಗಿ ಜಪಾನಿ ಆಟಗಾರ್ತಿಗೆ 3ನೇ ಸುತ್ತಿಗೆ ವಾಕ್‌ಓವರ್ ಲಭಿಸಿತು.