ನ್ಯೂಯಾರ್ಕ್: ತವರಿನ ನೆಲದಲ್ಲಿ ಅದ್ಭುತ ಆಟದ ಪ್ರದರ್ಶನ ನೀಡಿದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರು ವಿಶ್ವದ ನಂಬರ್ ವನ್ ಖ್ಯಾತಿಯ ಇಗಾ ಸ್ವಿಯಾಟೆಕ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಯುಎಸ್ ಓಪನ್ ಟೆನಿಸ್ ಕೂಟದಲ್ಲಿ ಸೆಮಿಫೈನಲ್ ಹಂತಕ್ಕೇರಿದರು.
30ರ ಹರೆಯದ ಪೆಗುಲಾ 6-2, 6-4 ಸೆಟ್‌ಗಳಿಂದ ಗೆಲುವು ಸಾಧಿಸಿ ಚೊಚ್ಚಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದರು. ಗುರುವಾರ ನಡೆಯುವ ಸೆಮಿಫೈನಲ್ ಹೋರಾಟದಲ್ಲಿ ಅವರು ಜೆಕ್ ಗಣರಾಜ್ಯದ ಶ್ರೇಯಾಂಕರಹಿತ ಆಟಗಾರ್ತಿ ಕರೋಲಿನಾ ಮುಚೋವಾ ಅವರ ಸವಾಲನ್ನು ಎದುರಿಸಲಿದ್ದಾರೆ.
2023ರ ಫ್ರೆಂಚ್ ಓಪನ್‌ನಲ್ಲಿ ಸ್ವಿಯಾಟೆಕ್ ವಿರುದ್ಧ ರನ್ನರ್ ಅಪ್ ಸ್ಥಾನ ಪಡೆದಿದ್ದ ಮುಚೋವಾ ಇಲ್ಲಿ ಸತತ ಎರಡನೇ ವರ್ಷ ಸೆಮಿಫೈನಲಿಗೇರಿದ ಸಾಧನೆ ಮಾಡಿದ್ದಾರೆ.
ಆರನೇ ಶ್ರೇಯಾಂಕದ ಪೆಗುಲಾ ಅವರು ಕಳೆದ ತಿಂಗಳು ನಡೆದ ಸಿನ್ಸಿನಾಟಿ ಓಪನ್ ಕೂಟದಲ್ಲಿ ಮುಚೋವಾ ಅವರನ್ನು ಸೋಲಿಸಿದ ಸಾಧನೆ ಮಾಡಿದ್ದಾರೆ.
ವನಿತೆಯರ ಇನ್ನೊಂದು ಸೆಮಿಫೈನಲ್ ಪಂದ್ಯವು ಎಮ್ಮಾ ನವಾರೊ ಮತ್ತು ಅರಿನಾ ಸಬಲೆಂಕಾ ಅವರ ನಡುವೆ ನಡೆಯಲಿದೆ. ಸಬಲೆಂಕಾ 2023ರ ಯುಎಸ್ ಓಪನ್‌ನ ಫೈನಲ್‌ನಲ್ಲಿ ಗಾಫ್ಗೆ ಸೋತಿದ್ದರು. ನವಾರೊ ಈ ಬಾರಿ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಗಾಫ್ ಅವರ ಆಟಕ್ಕೆ ಅಂತ್ಯಗೊಳಿಸಿದ್ದರು. ಸಬಲೆಂಕಾ ಈ ಹಿಂದೆ ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು.