Advertisement
ರವಿವಾರ ನಡುರಾತ್ರಿ ಬಳಿಕ ಸಾಗಿದ ಫೈನಲ್‌ನಲ್ಲಿ 6ನೇ ಶ್ರೇಯಾಂಕದ ಕೊಕೊ ಗಾಫ್ 2-6, 6-3, 6-2ರಿಂದ ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು ಮಣಿಸಿ ದರು. 2 ಗಂಟೆ, 6 ನಿಮಿಷಗಳ ಕಾಲ ಈ ಹೋರಾಟ ಸಾಗಿತು. ಸಬಲೆಂಕಾ ಸೋತರೂ ಸೋಮವಾರದ ನೂತನ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿಯಾಗಿ ಮೂಡಿಬರಲಿದ್ದಾರೆ.
ಫೈನಲ್ ಪಂದ್ಯ ವೀಕ್ಷಿಸಲು ಅಮೆರಿಕದ ಖ್ಯಾತನಾಮರೆಲ್ಲ ಆಗಮಿಸಿದ್ದರು. ಇವರಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಒಬ್ಬರು. ಕೊಕೊ ಗಾಫ್ 1999ರ ಬಳಿಕ ಯುಎಸ್ ಓಪನ್ ಪ್ರಶಸ್ತಿ ಗೆದ್ದ ತವರಿನ ಅತೀ ಕಿರಿಯ ಆಟಗಾರ್ತಿ. ಅಂದು 18 ವರ್ಷದ ಸೆರೆನಾ ವಿಲಿಯಮ್ಸ್ ಈ ಸಾಧನೆಗೈದಿದ್ದರು. ಗಾಫ್ಗೆ ಇದು 2ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿತ್ತು. 2022ರಲ್ಲಿ ಫ್ರೆಂಚ್ ಓಪನ್ ಫೈನಲ್‌ಗೆ ಲಗ್ಗೆಯಿರಿಸಿದರಾದರೂ ಅಲ್ಲಿ ಇಗಾ ಸ್ವಿಯಾಟೆಕ್‌ಗೆ ಶರಣಾದರು. 25 ವರ್ಷದ ಅರಿನಾ ಸಬಲೆಂಕಾ ಅವರಿಗೂ ಇದು ದ್ವಿತೀಯ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿತ್ತು. ಇದೇ ವಷಾರಂರಂಭದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಕಾಳಗದಲ್ಲಿ ಎಲೆನಾ ರಿಬಾಕಿನಾಗೆ ಸೋಲುಣಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಆದರೆ ವರ್ಷಾಂತ್ಯದ ಗ್ರ್ಯಾನ್‌ಸ್ಲಾಮ್ ಮಾತ್ರ ಒಲಿಯಲಿಲ್ಲ.
Related Articles
ಯುಎಸ್ ಓಪನ್ ಚಾಂಪಿಯನ್ ಕೊಕೊ ಗಾಫ್ ಈ ಸಾಧನೆಗಾಗಿ ಪಡೆದ ಬಹುಮಾನ ಎಷ್ಟು ಗೊತ್ತೇ? 3 ಮಿಲಿಯನ್ ಡಾಲರ್. ಹತ್ತಿರ ಹತ್ತಿರ 25 ಕೋಟಿ ರೂ! ಇದು ಪುರುಷ ವಿಜೇತರಿಗೆ ಸರಿಸಮನಾದ ಬಹುಮಾನ ಮೊತ್ತವಾಗಿದೆ. ರನ್ನರ್ ಅಪ್ ಅರಿನಾ ಸಬಲೆಂಕಾ ಖಾತೆಗೆ 12.5 ಕೋಟಿ ರೂ. ಜಮೆಗೊಂಡಿತು.
Advertisement
1973ರಲ್ಲಿ ಬಿಲ್ಲಿ ಜೀನ್ ಕಿಂಗ್ ವನಿತಾ ಸಮಾನತೆ ಬಗ್ಗೆ ಹೋರಾಟ ನಡೆಸಿ ಯಶಸ್ಸು ಕಂಡಿದ್ದರು. “ನೀವು ಪುರುಷರಿಗೆ ನೀಡುವಷ್ಟೇ ಬಹುಮಾನವನ್ನು ವನಿತೆಯರಿಗೂ ನೀಡಬೇಕು, ಇಲ್ಲವೇ ನಾನು ನಿವೃತ್ತಿ ಘೋಷಿಸುತ್ತೇನೆ’ ಎಂದು ಪಟ್ಟು ಹಿಡಿದಿದ್ದರು. ಆಗ ಅವರು ಹಾಲಿ ಚಾಂಪಿಯನ್ ಕೂಡ ಆಗಿದ್ದರು. ಅವರ ಹೋರಾಟ ಫಲ ಕೊಟ್ಟಿತ್ತು.
ಬಿಲ್ಲಿ ಜೀನ್ ಕಿಂಗ್ ಅವರ “ಬಹುಮಾನ ಸಮಾನತೆ’ಯ ಹೋರಾಟಕ್ಕೆ ಈಗ ಭರ್ತಿ 50 ವರ್ಷ. ಈ ಕೂಟದ ಆರಂಭಕ್ಕೂ ಮೊದಲು ಯುಎಸ್ ಓಪನ್ ಕೂಟದ ಸಂಘಟಕರು ಬಿಲ್ಲಿ ಜೀನ್ ಕಿಂಗ್ ಅವರನ್ನು ಆಹ್ವಾನಿಸಿ ಗೌರವಿಸಿದ್ದರು.ಕೊಕೊ ಗಾಫ್ ಕೂಡ ಇದನ್ನು ಸ್ಮರಿಸಿಕೊಂಡರು. “ಥ್ಯಾಂಕ್ಯೂ ಬಿಲ್ಲಿ, ಫಾರ್ ಫೈಟಿಂಗ್ ಫಾರ್ ದಿಸ್’ ಎಂದು ತಮ್ಮ ನಾಡಿನ ಹಿರಿಯ ಆಟಗಾರ್ತಿಯನ್ನು ಅಂಕಣದಲ್ಲಿ ನೆನಪಿಸಿಕೊಂಡರು.