ನ್ಯೂಯಾರ್ಕ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರಿಗೆ ಬಲವಾದ ಆಘಾತವಿಕ್ಕಿದ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಯುಎಸ್ ಓಪನ್ ಫೈನಲ್‌ಗೆ ಓಟ ಬೆಳೆಸಿದ್ದಾರೆ. ಇಲ್ಲಿ ಅವರ ಎದುರಾಳಿ, ದಾಖಲೆಯ 24ನೇ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ನೊವಾಕ್ ಜೊಕೋವಿಕ್. ಇವರಿಬ್ಬರ ಮುಖಾಮುಖಿ ರವಿವಾರ ನಡುರಾತ್ರಿ ಬಳಿಕ ಆರಂಭವಾಗಲಿದೆ.
ಕೂಟದಲ್ಲಿ ಉಳಿದಿದ್ದ ಕೊನೆಯ ಅಮೆರಿಕನ್ ಆಟಗಾರ ಬೆನ್ ಶೆಲ್ಟನ್ ಅವರಿಗೆ ಜೊಕೋವಿಕ್ 6-3, 6-2, 7-6 (7-4)ರಿಂದ ಆಘಾತವಿಕ್ಕಿದರು. ಅನಂತರದ ಕಾಳಗದಲ್ಲಿ ಡ್ಯಾನಿಲ್ ಮೆಡ್ವೆಡೇವ್ 7-6 (7-3), 6-1, 3-6, 6-3ರಿಂದ ಅಲ್ಕರಾಜ್ ಆಟಕ್ಕೆ ತೆರೆ ಎಳೆದರು.
ಇದು ಯುಎಸ್ ಓಪನ್‌ನಲ್ಲಿ ಜೊಕೋವಿಕ್ ಆಡಿದ 100ನೇ ಪಂದ್ಯವಾಗಿತ್ತು. 87ರಲ್ಲಿ ಗೆದ್ದು, 13ರಲ್ಲಿ ಸೋತಿದ್ದಾರೆ.ಶೆಲ್ಟನ್ ವಿರುದ್ಧ ಜೊಕೋ 2 ಗಂಟೆ, 40 ನಿಮಿಷಗಳ ಕಾಲ ಹೋರಾಡಿದರು. 20 ವರ್ಷದ ಶೆಲ್ಟನ್ 1992ರ ಬಳಿಕ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಅಮೆರಿಕದ ಅತೀ ಕಿರಿಯ ಆಟಗಾರನಾಗಿದ್ದರು.
ಜೊಕೋವಿಕ್ ಕ್ಯಾಲೆಂಡರ್ ವರ್ಷವೊಂದರಲ್ಲಿ ನಾಲ್ಕೂ ಗ್ರ್ಯಾನ್‌ಸ್ಲಾಮ್ ಕೂಟಗಳ ಫೈನಲ್ ತಲುಪಿದ 3ನೇ ನಿದರ್ಶನ ಇದಾಗಿದೆ. 2015 ಮತ್ತು 2021ರಲ್ಲಿ ಅವರು ಈ ಸಾಧನೆಗೈದಿದ್ದರು. ಇಲ್ಲಿ ಗೆದ್ದರೆ “ಓಪನ್ ಎರಾ’ದಲ್ಲಿ ಚಾಂಪಿಯನ್ ಎನಿಸಿಕೊಂಡ ಅತೀ ಹಿರಿಯ ಆಟಗಾರನೆಂಬ ದಾಖಲೆ ಸ್ಥಾಪಿಸಲಿದ್ದಾರೆ. ಈಗಿನ ದಾಖಲೆ ಆಸ್ಟ್ರೇಲಿಯದ ಕೆನ್ ರೋಸ್‌ವೆಲ್ ಹೆಸರಲ್ಲಿದೆ. 1970ರಲ್ಲಿ ಯುಎಸ್ ಓಪನ್ ಪ್ರಶಸ್ತಿ ಎತ್ತುವಾಗ ರೋಸ್‌ವೆಲ್ ವಯಸ್ಸು 35 ವರ್ಷ ಆಗಿತ್ತು.
ಒಂದೇ ಪ್ರಶಸ್ತಿ
ಡ್ಯಾನಿಲ್ ಮೆಡ್ವೆಡೇವ್ ಈವರೆಗೆ ಜಯಿಸಿದ್ದು ಒಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮಾತ್ರ. ಅದು 2021ರಲ್ಲಿ ನ್ಯೂಯಾರ್ಕ್‌ನಲ್ಲೇ ಒಲಿದಿತ್ತು. ಅಂದಿನ ಎದುರಾಳಿ ಬೇರೆ ಯಾರೂ ಅಲ್ಲ, ಇದೇ ನೊವಾಕ್ ಜೊಕೋವಿಕ್! ಅದು 6-4, 6-4, 6-4 ಅಂತರದ ನೇರ ಸೆಟ್‌ಗಳ ಜಯವಾಗಿತ್ತು. ಇತಿಹಾಸದ ಹೊಸ್ತಿಲಲ್ಲಿರುವ ಜೊಕೋವಿಕ್ 2 ವರ್ಷಗಳ ಬಳಿಕ ರಷ್ಯನ್ ಆಟಗಾರನ ವಿರುದ್ಧ ಸೇಡು ತೀರಿಸಿಕೊಳ್ಳುವರೇ ಎಂಬ ಕುತೂಹಲವೂ ಇಲ್ಲಿದೆ.