ವಾಷಿಂಗ್ಟನ್: ದುಡಿಯಲು ಆಗದೆ ಕೆಲವರು ಅಡ್ಡ ದಾರಿ ಹಿಡಿದು ಕಳ್ಳತನದ ಹಾದಿಯನ್ನು ಹಿಡಿಯುತ್ತಾರೆ. ಹಣಕಾಸಿನ ಕೊರತೆಯಿಂದಾಗಿ ಕಳ್ಳತನವನ್ನು ಮಾಡುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಳ್ಳ ತಾನು ಕಳ್ಳತನ ಮಾಡಿರುವ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.
ನಿಕೋಲಸ್ ಜಪಾಟರ್-ಲಾಮಾಡ್ರಿಡ್ ಎಂಬ 45 ವರ್ಷದ ವ್ಯಕ್ತಿಯೊಬ್ಬ ಎರಡು ಕಳ್ಳತನದ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಡಿ.5 ರಂದು ಬ್ಯಾಂಕ್ ವೊಂದಕ್ಕೆ ನಿಕೋಲಸ್ ಎಂಟ್ರಿ ಕೊಟ್ಟು ಹಣ ತೆಗೆದುಕೊಂಡು ಹೋಗಿದ್ದಾನೆ. ಬ್ಯಾಂಕ್ ಗೆ ಎಂಟ್ರಿ ಆಗುವ ವೇಳೆ ಪೊಲೀಸ್ ಟೋಪಿ ತೊಟ್ಟು, ತಾನೊಬ್ಬ ಪೊಲೀಸ್ ಎಂದು ಹೇಳಿ ಹಣ ಪಡೆದುಕೊಂಡು ಅಲ್ಲಿಂದ ಕಾಲ್ನಡಿಗೆಯಲ್ಲಿ ಪರಾರಿಯಾಗಿದ್ದಾನೆ.
ಇದಾದ ಎರಡು ದಿನದ ಬಳಿಕ ಡಿ.7 ರಂದು ಅದೇ ಪೊಲೀಸ್ ಕ್ಯಾಪ್ ತೊಟ್ಟುಕೊಂಡು ಅಂಗಡಿಯೊಂದಕ್ಕೆ ಹೋಗಿ ಕಾಗದದಲ್ಲಿ ಎಲ್ಲಾ ಹಣವನ್ನು ಹಾಗೂ ಸಿಗರೇಟನ್ನು ಕೊಡು ಎಂದು ಬರೆದು ಅಂಗಡಿಯ ಸಿಬ್ಬಂದಿಗೆ ನೀಡಿದ್ದಾನೆ.
ದರೋಡೆಯ ಸಮಯದಲ್ಲಿ ಕಿಸೆಗೆ ಕೈ ಹಾಕಿಕೊಂಡು ತನ್ನ ಬಳಿ ಆಯುಧವಿರುವಂತೆ ಜನರಿಗೆ ಹೆದರಿಸುತ್ತಿದ್ದ. ಪೊಲೀಸರು ಎರಡನೇ ಘಟನೆ ಆದ ಬಳಿಕ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿಸಿದ ಬಳಿಕ ಆತನನ್ನು ವಿಚಾರಣೆ ನಡೆಸಿದ್ದಾರೆ. ತನ್ನ ಬಳಿ ಕೆಲಸವಿಲ್ಲ ಇದರಿಂದ ನಾನು ತುಂಬಾ ಬೇಸರವಾಗಿದ್ದೇನೆ. ಈ ರೀತಿ ಬೋರಾಗಿರುವುದರಿಂದ ನಾನು ಇಂಥ ಕೃತ್ಯವನ್ನು ಎಸಗಿದೆ ಎಂದು ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾನೆ.