ವಾಷಿಂಗ್ಟನ್: ಗರ್ಭಿಣಿ ಪ್ರಿಯತಮೆಯ ಶವವನ್ನು ನ್ಯೂಯಾರ್ಕ್ ಹೈವೇಯಲ್ಲಿ ಎಸೆದು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ವ್ಯಕ್ತಿಗೆ(33ವರ್ಷ) ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Crime: 6 ತಿಂಗಳಲ್ಲಿ 9 ಮಹಿಳೆಯರ ಹತ್ಯೆ… ಸರಣಿ ಹಂತಕನ ಹುಡುಕಾಟದಲ್ಲಿ ಯುಪಿ ಪೊಲೀಸರು
ಪತ್ರಿಕಾ ಪ್ರಕಟನೆ ಪ್ರಕಾರ, ಗೋಯ್ ಚಾರ್ಲ್ಸ್ ಎಂಬಾತ 2020ರ ಅಕ್ಟೋಬರ್ ನಲ್ಲಿ ಪ್ರಿಯತಮೆ ವನೆಸ್ಸಾ ಪಿಯೆರ್ರೆ ಎಂಬಾಕೆಯನ್ನು ಹತ್ಯೆಗೈದ ಆರೋಪದಲ್ಲಿ ಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು.
ಕ್ವೀನ್ಸ್ ನ ಬೇಸೈಡ್ ನಲ್ಲಿರುವ ಹೊರೇಸ್ ಹಾರ್ಡಿಂಗ್ ಎಕ್ಸ್ ಪ್ರೆಸ್ ವೇನಲ್ಲಿ ಪಿಯೆರ್ರೆ ಶವ ಪತ್ತೆಯಾಗಿ ಮೂರು ದಿನಗಳ ಬಳಿಕ ಚಾರ್ಲ್ಸ್ ನನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗರ್ಭಿಣಿಯನ್ನು ಅಮಾನುಷವಾಗಿ ಹತ್ಯೆಗೈದು ರಸ್ತೆ ಸಮೀಪ ಎಸೆದು ಹೋಗಿರುವ ಆರೋಪಿ ಚಾರ್ಲ್ಸ್ ಗೆ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರ್ಟ್ ಗೆ ಮನವಿ ಮಾಡಿತ್ತು. ಶಿಕ್ಷೆಯಿಂದ ವೆನೆಸ್ಸಾ ಮರಳಿ ಬರುವುದಿಲ್ಲ. ಆದರೆ ಆಕೆಯ ಪೋಷಕರಿಗೆ ನ್ಯಾಯ ಒದಗಿಸಿಕೊಟ್ಟಂತಾಗಲಿದೆ ಎಂದು ಕ್ವೀನ್ಸ್ ಅಟಾರ್ನಿ ಮೆಲಿನಾ ಕಾಟ್ಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಗೋಯ್ ಚಾರ್ಲ್ಸ್ 2020ರ ಅಕ್ಟೋಬರ್ 23ರಂದು ಕಾರಿನಿಂದ ಪಿಯೆರ್ ಶವವನ್ನು ಹೊರ ತೆಗೆದು ರಸ್ತೆ ಸಮೀಪ ಎಸೆದು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪತ್ತೆಯಾದ ನಂತರ ಕೋರ್ಟ್ ಚಾರ್ಲ್ಸ್ ನನ್ನು ದೋಷಿ ಎಂದು ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.