Advertisement

ಸಿರಿಯಾ ಮೇಲೆ ಅಮೆರಿಕ ದಾಳಿ: ರಾಸಾಯನಿಕ ಅಸ್ತ್ರ ನಾಶ

06:00 AM Apr 15, 2018 | Team Udayavani |

ವಾಷಿಂಗ್ಟನ್‌: ಬಂಡುಕೋರರನ್ನು ಸದೆಬಡಿಯಲು ಸಿರಿಯಾದ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ರಾಸಾಯನಿಕ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಸಿರಿಯಾ ಸೇನಾ ನೆಲೆಗಳ ಮೇಲೆ ಅಮೆರಿಕ, ಬ್ರಿಟನ್‌ ಹಾಗೂ ಫ್ರಾನ್ಸ್‌ನ ಯುದ್ಧ ವಿಮಾನಗಳು ಬಾಂಬ್‌ ದಾಳಿ ನಡೆಸಿವೆ. ಇದು ಸಿರಿಯಾದ ಕಳೆದ ಏಳು ವರ್ಷಗಳ ಆಂತರಿಕ ಸಂಘರ್ಷಕ್ಕೆ ಹೊಸ ಆಯಾಮ ನೀಡಿದೆ.

Advertisement

ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಬಗ್ಗೆ ಘೋಷಣೆ ಮಾಡುತ್ತಿದ್ದಂತೆಯೇ, ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಸಿಡಿಲಬ್ಬರದ ಶಬ್ದದೊಂದಿಗೆ ಭಾರೀ ಸ್ಫೋಟಗಳು ಸಂಭವಿಸಿವೆ. ಮೂಲಗಳ ಪ್ರಕಾರ ಶನಿವಾರ ಬೆಳಗಿನ ಜಾವ 4 ಗಂಟೆಗೆ ದಾಳಿ ನಡೆದಿದೆ. ರಾಜಧಾನಿಯ ಉತ್ತರ ಮತ್ತು ಪೂರ್ವ ಭಾಗದಲ್ಲಿ ಸ್ಫೋಟದಿಂದಾಗಿ ಆಕಾಶ ದೆತ್ತರಕ್ಕೆ ಹೊಗೆ ಏಳುವುದು ಕಂಡುಬಂತು. ದಾಳಿಗೆ ಪ್ರತಿರೋಧವಾಗಿ ಡಮಾಸ್ಕಸ್‌ನಲ್ಲಿ ದೇಶದ ಧ್ವಜವನ್ನು ಎಲ್ಲ ಕಚೇರಿಗಳಲ್ಲೂ ಅರ್ಧಕ್ಕೆ ಇಳಿಸಲಾಗಿತ್ತು. ಸ್ಫೋಟದಿಂದ ಕೆಲವರಿಗೆ ಗಾಯ ಗಳಾಗಿದ್ದು, ಸಾವಿನ ಬಗ್ಗೆ ಮಾಹಿತಿ ಲಭಿಸಿಲ್ಲ.

ಬಶರ್‌ ಅಲ್‌ ಅಸ್ಸಾದ್‌ ಸಂಗ್ರಹಿಸಿದ್ದಾರೆ ಎನ್ನಲಾದ ರಾಸಾಯನಿಕ ಅಸ್ತ್ರಗಳ ಮೇಲೆ ನಿಗದಿತ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ವೈಜ್ಞಾನಿಕ ಸಂಶೋಧನಾ ಕೇಂದ್ರ, ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರ ಮತ್ತು ಕಮಾಂಡ್‌ ಪೋಸ್ಟ್‌ ಮೇಲೆ ದಾಳಿ ನಡೆದಿದೆ ಎಂದು ಅಮೆರಿಕದ ಸೇನಾ ಮುಖ್ಯಸ್ಥ ಜೋಸೆಫ್ ಡನ್‌ಫೋರ್ಡ್‌ ತಿಳಿಸಿದ್ದಾರೆ. 

ಈ ದಾಳಿಯಲ್ಲಿ ಬ್ರಿಟನ್‌ ಹಾಗೂ ಫ್ರಾನ್ಸ್‌ ಕೂಡ ಅಮೆರಿಕಕ್ಕೆ ಜತೆಯಾಗಿದೆ. ಡಮಾಸ್ಕಸ್‌ ಮತ್ತು ಹಾಮ್ಸ್‌ ಭಾಗದಲ್ಲಿ ಮಾತ್ರವೇ ದಾಳಿ ನಡೆಸಲಾಗಿದೆ. ಆರಂಭದಲ್ಲಿ ಸಿರಿಯಾದ ಕ್ಷಿಪಣಿಗಳು ಪ್ರತಿದಾಳಿ ನಡೆಸಿವೆ ಎಂದು ಹೇಳಲಾಗಿತ್ತಾದರೂ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ. ಸಿರಿಯಾ ಮಾಧ್ಯಮಗಳು ಹೇಳುವಂತೆ ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದರಿಂದ ಭಾರೀ ಪ್ರಮಾಣದ ಹೊಗೆ ಎದ್ದಿದೆ.

ದಾಳಿ ಮುಂದುವರಿಕೆ ಇಲ್ಲ: ಸದ್ಯದ ಮಟ್ಟಿಗೆ ದಾಳಿ ಮುಂದುವರಿಸುವ ಯಾವುದೇ ಪ್ರಸ್ತಾವವಿಲ್ಲ. ಇದು ಒಂದು ಬಾರಿಯ ದಾಳಿಯಾಗಿತ್ತು. ಹೀಗಾಗಿ ಇತರ ಪ್ರದೇಶಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇಲ್ಲ ಎಂದು ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ತಿಳಿಸಿದ್ದಾರೆ. ಆದರೆ ಈ ದಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಮೆರಿಕದ ಕೆಲವು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಸ್ಪಷ್ಟ ಕಾರ್ಯತಂತ್ರ ಅಥವಾ ಸಂಸತ್ತಿನ ಅನುಮತಿ ಇಲ್ಲದೇ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

ಇನ್ನೊಂದೆಡೆ ಈ ದಾಳಿಯು ಬಶರ್‌ ಸರಕಾರವನ್ನು ಉರುಳಿಸುವ ಕ್ರಮವಲ್ಲ. ಮಾತ್ರವಲ್ಲದೆ ಸಿರಿಯಾ ಬಗ್ಗೆ ಅಮೆರಿಕದ ನೀತಿಯಲ್ಲಿ ಬದಲಾವಣೆಯೂ ಇಲ್ಲ. ಆದರೆ ಅಮೆರಿಕವು ಯಾವುದೇ ರೀತಿಯಲ್ಲೂ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯನ್ನು ಅನುಮೋದಿಸುವುದಿಲ್ಲ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ವಕ್ತಾರೆ ಡಾನಾ ವೈಟ್‌ ಹೇಳಿದ್ದಾರೆ.

100ಕ್ಕೂ ಹೆಚ್ಚು ಕ್ಷಿಪಣಿ ಧ್ವಂಸ: ಇನ್ನೊಂದೆಡೆ ಅಮೆರಿಕ ಪ್ರಯೋಗಿಸಿರುವ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ. ರಷ್ಯಾದ ವಾಯುನೆಲೆ ಹಮೀಮಿಮ್‌ ಸಮೀಪದ ಯಾವ ಪ್ರದೇಶದಲ್ಲೂ ವಿದೇಶಿ ದಾಳಿ ಯಶಸ್ವಿಯಾಗಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ. ಇದೇ ವೇಳೆ ಚೀನ ಕೂಡ ಪ್ರತಿಕ್ರಿಯಿಸಿದ್ದು, ಅಮೆರಿಕವು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂ ಸಿದೆ ಎಂದು ಆರೋಪಿಸಿದೆ.

ತನಿಖೆ ಮುಂದುವರಿಕೆ: ಕಳೆದ ವರ್ಷ ಸಿರಿಯಾದ ಡೌಮಾ ನಗರದಲ್ಲಿ ಬಶರ್‌ ಸರಕಾರ ನಡೆಸಿದ ರಾಸಾಯನಿಕ ದಾಳಿಗೆ ಸಂಬಂಧಿಸಿ ಜಾಗತಿಕ ತನಿಖಾ ಸಂಸ್ಥೆ ಒಪಿಸಿಡಬ್ಲೂé ತನಿಖೆ ಮುಂದುವರಿಸಿದೆ. ಅಮೆರಿಕದ ದಾಳಿಯ ಅನಂತರವೂ ತನಿಖೆ ಮುಂದುವರಿಯಲಿದ್ದು, ಶೀಘ್ರದಲ್ಲೇ ವರದಿ ನೀಡಲಾಗುವುದು ಎಂದು ಹೇಳಲಾಗಿದೆ. ಏತನ್ಮಧ್ಯೆ ರಷ್ಯಾ ಕೋರಿಕೆ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶನಿವಾರ ರಾತ್ರಿ ಸಿರಿಯಾ ಮೇಲಿನ ದಾಳಿ ಕುರಿತು ಸಭೆ ನಡೆಸಿ, ಚರ್ಚಿಸಿದೆ.

ಕಳೆದ ರಾತ್ರಿ ಯಶಸ್ವಿ 
ದಾಳಿ ನಡೆಸಲಾಗಿದೆ. ಫ್ರಾನ್ಸ್‌ , ಇಂಗ್ಲೆಂಡ್‌ಗೆ ಧನ್ಯವಾದಗಳು. ಯೋಜನೆ ಯಶಸ್ವಿಯಾಗಿದೆ.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ರಷ್ಯಾಗೆ ಎಚ್ಚರಿಕೆ 
ಸಿರಿಯಾದ ಬಶರ್‌ ಪರ ನಿಲುವು ತಳೆಯದಂತೆ ರಷ್ಯಾ, ಇರಾನ್‌ಗೆ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಈ ಕೆಟ್ಟ ದಾರಿಯಲ್ಲಿ ಸಾಗಬೇಕೇ, ಬೇಡವೇ ಎಂಬುದನ್ನು ರಷ್ಯಾ ನಿರ್ಧರಿಸಬೇಕು ಎಂದಿದ್ದಾರೆ. 

ಸಿರಿಯಾದಲ್ಲಿ ಇತ್ತೀಚಿನ ದಾಳಿ ನಮ್ಮ ಗಮನಕ್ಕೆ ಬಂದಿದೆ. ಸನ್ನಿವೇಶವನ್ನು ಭಾರತ ಗಮನಿಸುತ್ತಿದೆ. ರಾಸಾಯನಿಕ ದಾಳಿ ನಡೆದಿದೆ ಎಂದಾದರೆ ಇದು ಅಕ್ಷಮ್ಯ. ಒಪಿಸಿಡಬ್ಲೂ ಈ ಬಗ್ಗೆ ವಾಸ್ತವಾಂಶವನ್ನು ಆಧರಿಸಿ ತನಿಖೆ ನಡೆಸುತ್ತದೆ ಎಂದು ನಾವು ಭಾವಿಸಿದ್ದೇವೆ.
ರವೀಶ್‌ ಕುಮಾರ್‌, ವಿದೇಶಾಂಗ ವ್ಯವಹಾರ ಖಾತೆ

Advertisement

Udayavani is now on Telegram. Click here to join our channel and stay updated with the latest news.

Next