ವಾಷಿಂಗ್ಟನ್: ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರ. ಈ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದು ಭಾರತಕ್ಕೆ 2 ದಿನಗಳ ಕಾಲ ಭೇಟಿ ನೀಡಿ ತೆರಳಿದ ಬೆನ್ನಲ್ಲೇ ದೆಹಲಿ ಹಿಂಸಾಚಾರದ ಬಗ್ಗೆ ಅಮೆರಿಕ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ದಿಲ್ಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಕಾಂಗ್ರೆಸ್ ಸಂಸದೆ ಪ್ರಮೀಳಾ ಜಯ್ ಪಾಲ್, ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಭೀಕರವಾಗಿದೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಪ್ರಜಾಪ್ರಭುತ್ವ ಧಾರ್ಮಿಕ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ವಿಭಜನೆ ಹಾಗೂ ಪಕ್ಷಪಾತ ಎಸಗುವುದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಜಯ್ ಪಾಲ್ ಟ್ವೀಟ್ ಮಾಡಿದ್ದು, ಭಾರತದಲ್ಲಿ ನಡೆಯುತ್ತಿರುವ ಘಟನೆಯನ್ನು ಜಗತ್ತು ಗಮನಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಅಮೆರಿಕ ಕಾಂಗ್ರೆಸ್ ಸದಸ್ಯ ಅಲಾನ್ ಲೋವೆಂಥಾಲ್ ಇದೊಂದು ನೈತಿಕ ನಾಯಕತ್ವದ ದುರಂತ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕಿನ ಬೆದರಿಕೆ ಬಗ್ಗೆ ನಾವು ಮಾತನಾಡಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಮತ್ತೊಂದೆಡೆ ಡೆಮೋಕ್ರಟಿಕ್ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ, ಸೆನೆಟರ್ ಎಲಿಝಬೆತ್ ವಾರೆನ್ ಕೂಡಾ ದಿಲ್ಲಿ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ನಾವು ಭಾರತದ ಜತೆ ಪ್ರಜಾಪ್ರಭುತ್ವ ಪಾಲುದಾರರನ್ನಾಗಿ ಮಾಡಿಕೊಳ್ಳುವ ಮೂಲಕ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಮುಖ್ಯ. ಆದರೆ ನಮ್ಮ ಮೌಲ್ಯಗಳ ಬಗ್ಗೆ ಮಾತನಾಡಲೇಬೇಕಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಬೇಕಾಗಿದೆ. ಶಾಂತಿಯುತ ಪ್ರತಿಭಟನಾಕಾರರ ವಿರುದ್ದದ ಹಿಂಸಾಚಾರ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.