ವಾಷಿಂಗ್ಟನ್ : ಪಾಕಿಸ್ಥಾನದಲ್ಲಿ ನೆಲೆಗೊಂಡಿರುವ ಉಗ್ರರು ಹಾಗೂ ಮುಂಬಯಿ ದಾಳಿಯ ಮಾಸ್ಟರ್ ಮೈಂಡ್, ಹಾಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ (ಜೆಯುಡಿ) ಮೇಲೆ ಅಮೆರಿಕವು ನಿಷೇಧಗಳನ್ನು ಹೇರಿದೆ.
ಈ ಉಗ್ರ ಜಾಲಗಳ ನಾಯಕತ್ವಕ್ಕೆ ಹಾಗೂ ಭಯೋತ್ಪಾದನೆಗಾಗಿ ನಿಧಿ ಸಂಗ್ರಹಿಸುವ ಅವುಗಳ ಸಾಮರ್ಥ್ಯಕ್ಕೆ ಕಡಿವಾಣ ಹಾಕುವುದೇ ಅಮೆರಿಕದ ಈ ಕ್ರಮದ ಹಿಂದಿರುವ ಉದ್ದೇಶವಾಗಿದೆ.
ಲಷ್ಕರ ಎ ತಯ್ಯಬ (ಎಲ್‌ಇಟಿ) ಮತ್ತು ಅದರ ಮುಂಚೂಣಿಯ ದಾನ ಚಟುವಟಿಕೆಗಳ ಸಂಘಟನೆಯಾಗಿರುವ ಜಮಾತ್ ಉದ ದಾವ್, ತಾಲಿಬಾನ್, ಜಮಾತ್ ಉಲ್ ದಾವಾ ಅಲ್ ಕುರಾನ್ (ಜೆಡಿಕ್ಯು), ದಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ ಮತ್ತು ಐಸಿಸ್ ಖೋರಾಸಾನ್ ಸಂಘಟನೆಗಳ ಮೇಲೆ ಅಮೆರಿಕ ನಿಷೇಧಗಳನ್ನು ಹೇರಿದೆ.
ಖೋರಾಸಾನ್ ಎನ್ನುವುದು ಅತ್ಯಂತ ವಿಶಾಲವಾಗಿರುವ ಐತಿಹಾಸಿಕ ಪ್ರದೇಶವಾಗಿದೆ. ಇದು ಈಶಾನ್ಯ ಇರಾನ್, ದಕ್ಷಿಣ ಟರ್ಕ್‌ಮೆನಿಸ್ಥಾನ್ ಮತ್ತು ಉತ್ತರ ಅಫ್ಘಾನಿಸ್ಥಾನ್ ಮತ್ತು ಭಾರತದ ಕೆಲವು ಭಾಗಗಳನ್ನು ಒಳಗೊಂಡಿದೆ.
ಅಮೆರಿಕದ ನಿಷೇಧಗಳಿಗೆ ವಿಶೇಷವಾಗಿ ಗುರಿಯಾಗಿರುವವರೆಂದರೆ ಹಯಾತುಲ್ಲಾ ಗುಲಾಮ್ ಮುಹಮ್ಮದ್ (ಹಾಜಿ ಹಯಾತುಲ್ಲಾ), ಅಲಿ ಮುಹಮ್ಮದ್ ಅಬು ತುರಾಬ್, ಇನಾಯತ್ ಉರ್ ರೆಹಮಾನ್, ಮತ್ತು ಆತನಿಂದ ನಡೆಸಲ್ಪಡುತ್ತಿರುವ ತಥಾಕಥಿತ ದಾನ ಸಂಸ್ಥೆಯಾಗಿರುವ “ದಿ ವೆಲ್‌ಫೇರ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ ಆಫ್ ಜಮಾತ್ ಉದ ದಾವಾ ಫಾರ್ ಕುರಾನ್ ಆ್ಯಂಡ್ ಸುನಾಹ್ (ಡಬ್ಲ್ಯುಡಿಓ).
ನಿಷೇಧ ವಿಧಿಸುವ ಅಮೆರಿಕದ ಈ ಕ್ರಮದಿಂದ ಪಾಕಿಸ್ಥಾನದ ಉಗ್ರ ಸಂಘಟನೆಗಳಾಗಿರುವ ತಾಲಿಬಾನ್, ಅಲ ಕಾಯಿದಾ, ಐಸಿಸ್ ಮತ್ತು ಎಲ್‌ಇಟಿ ಕೈಗೊಳ್ಳುವ ನಿಧಿ ಸಂಗ್ರಹ ಹಾಗೂ ನೇಮಕಾತಿಯ ಮೇಲೆ ಭಾರೀ ಆರ್ಥಿಕ ಹೊಡೆತ ಬೀಳಲಿದೆ ಎಂದು ಅಮೆರಿಕದ ವಿದೇಶೀ ಆಸ್ತಿಪಾಸ್ತಿ ನಿಯಂತ್ರಣದ ಕಂದಾಯ ಕಾರ್ಯಾಲಯದ ನಿರ್ದೇಶಕ ಜಾನ್ ಸ್ಮಿತ್ ಹೇಳಿದರು.