ವಾಷಿಂಗ್ಟನ್: ಉತ್ತರಕೋರಿಯಾದ ಪರಮಾಣು ಬಾಂಬ್ ಸವಾಲಿನ ಕುರಿತಾಗಿ ಕೆಂಡಾಮಂಡಲವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ತಾಳ್ಮೆ ಯ ದಿನಗಳು ಮುಗಿದು ಹೋಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ದಕ್ಷಿಣ ಕೋರಿಯಾ ಅಧ್ಯಕ್ಷ ಮೂನ್ ಜೆ ಇ ಅವರೊಂದಿಗೆ ಮಾತುಕತೆ ನಡಸಿದ ಬಳಿಕ ಈ ಖಾರವಾದ ಹೇಳಿಕೆ ನೀಡಿದ್ದಾರೆ.
ಉತ್ತರಕೋರಿಯಾ ನಾಯಕತ್ವಕ್ಕೆ ಮನುಷ್ಯ ಜೀವದ ಬಗ್ಗೆ ಗೌರವವಿಲ್ಲ. ಅವರಿಗೆ ತನ್ನ ನಾಗರಿಕರು ಮತ್ತು ಸುತ್ತಲಿನ ನಾಗರಿಕರ ರಕ್ಷಣೆಯ ಬಗ್ಗೆ ಜವಾಬ್ದಾರಿಯೇ ಇಲ್ಲ. ಇದನ್ನು ಪದೇ ಪದೇ ಸಾಬೀತು ಪಡಿಸಿದೆ. ಉತ್ತರಕೋರಿಯಾದೊಂದಿಗಿನ ಆಯಕಟ್ಟಿನ ತಾಳ್ಮೆಯ ದಿನಗಳು ಮುಗಿದುಹೋಗಿದ್ದು , ಹಲವು ವರ್ಷಗಳಿಂದ ಇದು ವಿಫಲವಾಗುತ್ತಾ ಬಂದಿದೆ.ನಿಜವಾಗಿಯೂ ತಾಳ್ಮೆಯ ದಿನಗಳು ಮುಗಿದುಹೋಗಿವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಉತ್ತರಕೋರಿಯಾದ ಸವಾಲಿನ ಕುರಿತಾಗಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ರಕ್ಷಣೆಗಾಗಿ ಟ್ರಂಪ್ ದಕ್ಷಿಣ ಕೋರಿಯಾ ಮತ್ತು ಜಪಾನ್‌ನೊಂದಿಗೆ ಮಾತುಕತೆ ನಡೆಸಿದ್ದಾರೆ. ನಮ್ಮ ಮುಖ್ಯ ಉದ್ದೇಶ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ. ಅಮೆರಿಕ ಯಾವತ್ತೂ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಶಕ್ತವಾಗಿದೆ ಎಂದಿದ್ದಾರೆ.
ಉತ್ತರ ಕೋರಿಯಾ ಮತ್ತು ದಕ್ಷಿಣ ಕೋರಿಯಾ ನಡುವೆ ಯುದ್ಧ ಸದೃಶ ವಾತಾವರಣವಿದ್ದು, ಪರಮಾಣು ಪರೀಕ್ಷೆಯನ್ನು ವಿಶ್ವಕ್ಕೆ ಸವಾಲೊಡ್ಡಿ ಉತ್ತರಕೋರಿಯಾ ನಡೆಸಿತ್ತು ಇದು ಅಮೆರಿಕಾವನ್ನು ಕೆರಳಿಸಿತ್ತು.