Advertisement

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

01:29 PM Nov 06, 2024 | Team Udayavani |

ಇಸ್ರೇಲ್‌-ಹಮಾಸ್‌, ಇಸ್ರೇಲ್‌-ಇರಾನ್‌ ನಡುವಿನ ಬಿಕ್ಕಟ್ಟಿನ ನಡುವೆಯೇ ಮಂಗಳವಾರ (ನ.5)ರಂದು ಅಮೆರಿಕದ ಹೊಸ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಚುನಾವಣೆ ಡೆಮಾಕ್ರಾಟ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ನಡುವೆ ತೀವ್ರ ಪೈಪೋಟಿ ಇದೆ. ಅಮೆರಿಕದಲ್ಲಿ ಯಾವ ರೀತಿ ಚುನಾವಣೆ ನಡೆಸಲಾಗುತ್ತದೆ, ಅದರಿಂದ ಭಾರತ ಮತ್ತು ಅಮೆರಿಕ ನಡುವೆ ಪ್ರಭಾವ ಬೀರಲಿದೆ ಎಂಬ ವಿಚಾರಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

Advertisement

ಮಂಗಳವಾರವೇ ಅಧ್ಯಕ್ಷೀಯ ಚುನಾವಣೆ ಏಕೆ?
ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೆ ಒಂದು ಬಾರಿ ಚುನಾವಣೆ ನಡೆಯುತ್ತದೆ. 1845ರ ಮೊದಲು ವಿವಿಧ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಚುನಾವಣೆ ನಡೆಸಲಾಗುತ್ತಿತ್ತು. ದೇಶದಲ್ಲಿ ಒಂದೇ ರೀತಿಯ ಚುನಾವಣೆ ನಡೆಸಬೇಕು ಎಂಬ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗಿತ್ತು. ರವಿವಾರ ಕ್ರಿಶ್ಚಿಯನ್‌ ಸಮುದಾಯದವರು ಪ್ರಾರ್ಥನೆಗಾಗಿ ತೆರಳುತ್ತಿರುವುದರಿಂದ ಆ ದಿನ ಮತದಾನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನವೆಂಬರ್‌ನ ಮೊದಲ ಸೋಮವಾರದ ಅನಂತರದ ಮೊದಲ ಮಂಗಳವಾರ ಮತ­ದಾನ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು.

ಅಮೆರಿಕ ಚುನಾವಣೆ ಹೇಗೆ ನಡೆಯುತ್ತದೆ?
ಭಾರತದಂತೆಯೇ ಅಮೆರಿಕದ ಚುನಾವಣ ಆಯೋಗ ಚುನಾವಣೆಗಳನ್ನು ನಡೆಸುತ್ತದೆ. ಭಾರತದ ಚುನಾವಣ ಆಯೋಗ ನಡೆಸುವಂತೆ ನೇರವಾಗಿ ಅದು ಚುನಾವಣೆ ಮತ್ತು ಮತದಾನದ ಪ್ರಕ್ರಿಯೆಗಳನ್ನು ನಿಯಂತ್ರಿಸುವುದಿಲ್ಲ. ಅಮೆರಿ­ಕದ 50 ಪ್ರಾಂತ್ಯ ಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಅದು ನಿರ್ದೇಶನ ಮಾತ್ರ ನೀಡುತ್ತದೆ. ಆ ದೇಶದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಆಯಾ ಪ್ರಾಂತ್ಯದಲ್ಲಿಯೇ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಜಾರಿ ಗೊಳಿಸಲಾಗುತ್ತದೆ. ಸಂವಿಧಾನದಲ್ಲಿ ದೇಶಕ್ಕೆ ಸಂಬಂಧಿಸಿದಂತೆ ಚುನಾವಣೆ ಹೇಗೆ ನಡೆಸಬೇಕು ಎಂಬ ಉಲ್ಲೇಖವೇ ಇಲ್ಲ. ಏಕೆಂದರೆ ಅವು ಸ್ಥಳೀಯ ಮಟ್ಟದಲ್ಲಿಯೇ ನಿಯಂತ್ರಿತವಾಗಿರುತ್ತವೆ.

“ಎಲೆಕ್ಟೋರಲ್‌ ಕಾಲೇಜು’ ವ್ಯವಸ್ಥೆ
ಅಮೆರಿಕದಲ್ಲಿ ಮತದಾರರು ಕಮಲಾ ಹ್ಯಾರಿಸ್‌ ಅಥವಾ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಬೇಕು ಎಂದು ಮತ ಹಾಕಲು ವ್ಯವಸ್ಥೆ ಇಲ್ಲ. ಅಲ್ಲಿ ಇರುವ “ಮತದಾರರ ಗುಂಪು’ ಅಥವಾ “ಎಲೆಕ್ಟೋರಲ್‌ ಕಾಲೇಜು’ ಯಾರು ಅಧ್ಯಕ್ಷರಾಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಅಮೆರಿಕದಲ್ಲಿ ಇರುವ 50 ಪ್ರಾಂತ್ಯಗಳಲ್ಲಿ ಇರುವ ಜನಸಂಖ್ಯೆಗೆ ಅನುಗುಣವಾಗಿ “ಎಲೆಕ್ಟೋರಲ್‌ ಕಾಲೇಜು’ ಇರುತ್ತದೆ. ಹೀಗಾಗಿ, ಮತದಾರರು ಅವುಗಳಿಗೆ ಮತ ಹಾಕುತ್ತಾರೆ. ಅಮೆರಿಕದಲ್ಲಿ ಸದ್ಯ 538 “ಎಲೆಕ್ಟೋರಲ್‌ ಕಾಲೇಜು’ಗಳು ಇವೆ. ಕ್ಯಾಲಿಫೋರ್ನಿಯಾದಲ್ಲಿ ಅತಿ ಹೆಚ್ಚು ಅಂದರೆ 54, ನಾರ್ತ್‌ ಡಕೋಟ ಪ್ರಾಂತ್ಯದಲ್ಲಿ ಕನಿಷ್ಠ 3 “ಎಲೆಕ್ಟೋರಲ್‌ ಕಾಲೇಜು’ ಗಳು ಇವೆ. ಇನ್ನೊಂದು ಕುತೂಹಲ­ಕಾರಿ ಅಂಶವೆಂದರೆ ಎಲೆಕ್ಟೋರಲ್‌ ಕಾಲೇಜುಗಳ ಆಯ್ಕೆಗೆ ಕೂಡ ಮತದಾನ ನಡೆಯುತ್ತದೆ.

ಏಳು ಪ್ರಾಂತ್ಯಗಳು ನಮ್ಮ ಹಿಂದಿ ರಾಜ್ಯಗಳಿದ್ದಂತೆ
ಹೊಸ ಅಧ್ಯಕ್ಷರ ಆಯ್ಕೆಯಲ್ಲಿ 93 ಎಲೆಕ್ಟೋರಲ್‌ ಕಾಲೇಜುಗಳು ಇರುವ 7 ಪ್ರಾಂತ್ಯಗಳು ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಪೆನ್ಸಿಲ್ವೇನಿಯಾ (19), ನಾರ್ತ್‌ ಕೆರೊಲಿನಾ (16), ಜಾರ್ಜಿಯಾ (16), ಮಿಚಿಗನ್‌ (15), ಅರಿಜೋನಾ (11), ವಿಸ್ಕಾನ್‌ಸಿನ್‌ (10), ನೆವಾಡಾ (6) ಪ್ರಮುಖ ಪಾತ್ರ ವಹಿಸಲಿವೆ. ಸುಲಭವಾಗಿ ಮನವರಿಕೆಯಾಗಬೇಕಾಗಿದ್ದರೆ ನಮ್ಮ ದೇಶದಲ್ಲಿ ಉತ್ತರ ಪ್ರದೇಶ ಸೇರಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ನಿಗಿದಿತ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದರೆ ದಿಲ್ಲಿಯಲ್ಲಿ ಗದ್ದುಗೆ ಏರಲು ಸಾಧ್ಯವಾದಂತೆ.

Advertisement

ಅಧ್ಯಕ್ಷರಾಗಲು ಎಷ್ಟು ಮತಗಳು ಬೇಕು?
ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಬೇಕಾದರೆ ನಿಗದಿತ ಅಭ್ಯರ್ಥಿಗೆ 538 ಎಲೆಕ್ಟೋರಲ್‌ ಕಾಲೇಜುಗಳ ಪೈಕಿ 270 ಮತಗಳು ಪ್ರಾಪ್ತವಾಗಬೇಕು.

ಚುನಾವಣೇಲಿ ಇವಿಎಂ ಇಲ್ಲ, ಮುದ್ರಿತ ಮತಪತ್ರ
ನಮ್ಮ ದೇಶದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ವೇಳೆ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಬಳಕೆ ಮಾಡಲಾಗು­ತ್ತದೆ. ಅಮೆರಿಕದಲ್ಲಿ ಮುದ್ರಿತ ಮತಪತ್ರಗಳನ್ನು ಬಳಕೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಹೆಸರು ಮುದ್ರಿತವಾಗಿರುವ ಮತಪತ್ರಗಳನ್ನು ಕಂಪ್ಯೂಟರ್‌ ಸಹಾಯದ ದೃಢೀಕರಣ ವ್ಯವಸ್ಥೆ (ಬ್ಯಾಲೆಟ್‌ ಮಾರ್ಕಿಂಗ್‌ ಡಿವೈಸ್‌) ಮೂಲಕ ತಮ್ಮ ಇಚ್ಛೆಯ ವ್ಯಕ್ತಿಗಳಿಗೆ ಮತಹಾಕಲಾಗುತ್ತದೆ. ಅದರ ಮೂಲಕ ಯಾವ ಅಭ್ಯರ್ಥಿಗೆ ಮತಹಾಕಲಾಗಿದೆ ಎಂಬ ಮುದ್ರಿತ ಪ್ರತಿಯನ್ನು ಯಾವ ಅಭ್ಯರ್ಥಿಗೆ ಎಷ್ಟು ಮತಗಳು ಎಂಬುದರ ಮೂಲಕ ತಾಳೆ ಹಾಕಲು ಬಳಸಲಾಗುತ್ತದೆ.

ಮತಗಳ ಎಣಿಕೆ ಆರಂಭವಾಗುವುದು ಯಾವಾಗ?
ನ.5ರಂದು ಮತದಾನ ಮುಕ್ತಾಯವಾಗುತ್ತಲೇ ಆಯಾ ಮತಕೇಂದ್ರಗಳಲ್ಲಿ ಸ್ಕ್ಯಾನರ್‌ಗಳ ಮೂಲಕ ಮತ ಎಣಿಕೆ ಶುರು ಮಾಡಲಾಗುತ್ತದೆ. ಅನಂತರ ಮುದ್ರಿತ ಪ್ರತಿಯ ಜತೆಗೆ ಅದನ್ನು ತಾಳೆ ಹಾಕಲಾಗುತ್ತದೆ.

ಚುನಾವಣ ಫ‌ಲಿತಾಂಶ ಟೈ ಆಗಲು ಸಾಧ್ಯವೇ?
ಈ ಬಾರಿಯ ಫ‌ಲಿತಾಂಶದಲ್ಲಿ ಟ್ರಂಪ್‌, ಕಮಲಾ ಹ್ಯಾರಿಸ್‌ಗೆ ಒಂದೇ ರೀತಿಯ ಮತಗಳು ಪ್ರಾಪ್ತವಾಗಿ ಟೈ ಆಗುವ ಸಾಧ್ಯತೆ ಇದೆ. ಕಮಲಾ ಹ್ಯಾರಿಸ್‌ ವಿಸ್ಕಾನ್‌ಸಿನ್‌, ಮಿಚಿಗನ್‌, ಅರಿಜೋನಾ, ನೆವಾಡಾಗಳಲ್ಲಿ ಜಯಗಳಿಸಿ, ಪೆನ್ಸಿಲ್ವೇನಿಯಾ ಮತ್ತು ಜಾರ್ಜಿ­ಯಾಗಳಲ್ಲಿ ಸೋಲು ಅನುಭವಿಸಿದರೆ ಟ್ರಂಪ್‌, ಕಮಲಾಗೆ ತಲಾ 269 ಮತಗಳು ಬರುವ ಸಾಧ್ಯತೆಗಳಿವೆ. ಹೀಗಾದಲ್ಲಿ ಅಮೆರಿಕದ ಸಂಸತ್‌ನ ಕೆಳಮನೆ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ ನಲ್ಲಿ ವಿಜಯಿ ಅಭ್ಯರ್ಥಿಯನ್ನು ತೀರ್ಮಾನಿಸಲಾಗುತ್ತದೆ.

ಕಮಲಾ, ಟ್ರಂಪ್‌ ನಡುವೆ ನಿಕಟ ಪೈಪೋಟಿ
ಅಮೆರಿಕದ ಉಪಾಧ್ಯಕ್ಷೆ ಮತ್ತು ಡೆಮಾಕ್ರಾಟ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ನಿಕಟ ಪೈಪೋಟಿ ಇದೆ. ನ.3ರಂದು ಪ್ರಕಟವಾಗಿರುವ ಸಮೀಕ್ಷೆಯ ಪ್ರಕಾರ ಕಮಲಾ ಹ್ಯಾರಿಸ್‌ ಅವರಿಗೆ ಶೇ.49 ಮಂದಿ, ಡೊನಾಲ್ಡ್‌ ಟ್ರಂಪ್‌ ಪರ ಶೇ.48 ಮಂದಿ ಬೆಂಬಲ ಸೂಚಿಸಿದ್ದಾರೆ. “ನ್ಯೂಸ್‌ವೀಕ್‌’ ನಿಯತ ಕಾಲಿಕ ನಡೆಸಿದ ಅಧ್ಯಯನದ ಪ್ರಕಾರ ಡೊನಾಲ್ಡ್‌ ಟ್ರಂಪ್‌ ಅವರು ಓಕ್ಲಹಾಮಾ, ಸೌತ್‌ ಡಕೋಟ, ಟೆನ್ನೆಸ್ಸೀ, ಮಿಸ್ಸೌರಿ, ನೆಬ್ರಾಸ್ಕಾ, ಮೊಂಟಾನಾಗಳಲ್ಲಿ ಭಾರೀ ಪ್ರಮಾಣದಲ್ಲಿ ಮತಗಳನ್ನು ಪಡೆಯುವ ಸಾಧ್ಯತೆಗಳು ಇವೆ.

ಭಾರತದ ಮೇಲೇನು ಪರಿಣಾಮ?
ಸದ್ಯ ಅಮೆರಿಕ ಮತ್ತು ಭಾರತದ ನಡುವೆ ಬಾಂಧವ್ಯ ಅತ್ಯುತ್ತಮವಾಗಿದೆ. ರಕ್ಷಣ ಕ್ಷೇತ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಬಾಂಧವ್ಯ ದೃಢವಾಗಿದೆ. ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿದ್ದಾಗಲೂ ಅದನ್ನು ಕಾಯ್ದುಕೊಳ್ಳಲಾಗಿತ್ತು. 2020ರ ಚುನಾವಣೆ ವೇಳೆ ಟ್ರಂಪ್‌ ಅವರು ಗುಜರಾತ್‌ಗೆ ಆಗಮಿಸಿ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಭಾಷಣವನ್ನೂ ಮಾಡಿದ್ದರು. ಅನಂತರ ಡೆಮಾಕ್ರಟಿಕ್‌ ಪಕ್ಷದ ಬೈಡೆನ್‌ ಅಧ್ಯಕ್ಷರಾದಾಗಲೂ ಸಂಬಂಧ ಉತ್ತಮವಾಗಿಯೇ ಇತ್ತು. ಹಾಲಿ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಅಥವಾ ಟ್ರಂಪ್‌ ಗೆದ್ದರೂ ಭಾರತದ ಜತೆಗಿನ ಬಾಂಧವ್ಯದ ಮೇಲೆ ಋಣಾತ್ಮಕ ಫ‌ಲಿತಾಂಶವಂತೂ ಬೀರುವುದಿಲ್ಲ ಎಂಬ ನಿರೀಕ್ಷೆಗಳಿವೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಮುಖಾಂಶಗಳು
ನ.5- ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯುವ ದಿನ.

ನ.5ರಂದು ಮತದಾನ ಮುಕ್ತಾಯ ಆದ ತತ್‌ಕ್ಷಣವೇ ಮತ ಎಣಿಕೆ ಶುರು.

ಡಿ.11- ಈ ದಿನದ ಒಳಗಾಗಿ ಗೆದ್ದವರಿಗೆ ಪ್ರಮಾಣ ಪತ್ರ ನೀಡಬೇಕು.

538- ಅಮೆರಿಕದಲ್ಲಿ ಇರುವ ಎಲೆಕ್ಟೋರಲ್‌ ಕಾಲೇಜುಗಳು.

54- ಕ್ಯಾಲಿಪೋರ್ನಿಯಾದಲ್ಲಿರುವ ಎಲೆಕ್ಟೋರಲ್‌ ಕಾಲೇಜುಗಳು.

03- ನಾರ್ತ್‌ ಡಕೋಟದಲ್ಲಿರುವ ಎಲೆಕ್ಟೋರಲ್‌ ಕಾಲೇಜುಗಳು.

270- ಅಧ್ಯಕ್ಷರಾಗಿ ಆಯ್ಕೆಯಾಗಲು ಬೇಕಾಗುವ ಮತಗಳು.

2025 ಜ.6- ಸಂಸತ್‌ ಜಂಟಿ ಅಧಿವೇಶನದಲ್ಲಿ ಅಧಿಕೃತ ಫ‌ಲಿತಾಂಶ.

2025 ಜ.20- ಅಮೆರಿಕದ ಹೊಸ ಅಧ್ಯಕ್ಷರ ಪ್ರಮಾಣ ಸ್ವೀಕಾರ.

Advertisement

Udayavani is now on Telegram. Click here to join our channel and stay updated with the latest news.

Next