ನವದೆಹಲಿ: ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ಇದೇ ಮೊದಲ ಬಾರಿಗೆ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಅದ್ಧೂರಿ ಔತಣಕೂಟ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಜೋ ಬೈಡೆನ್ “ಪ್ರತಿಯೊಬ್ಬರಿಗೂ ಅಜ್ಞಾನವೆಂಬ ಕತ್ತಲಿನಿಂದ ಜಗತ್ತನ್ನು ಬೆಳಕಿನೆಡೆಗೆ ತರುವ ಸಾಮರ್ಥ್ಯ ಇದೆ’ ಎಂದು ಹೇಳಿದ್ದಾರೆ.
ಇದಲ್ಲದೆ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿರುವ ಭಾರತಕ್ಕೂ ಅವರು ಬೆಳಕಿನ ಹಬ್ಬದ ಶುಭ ಕೋರಿದ್ದಾರೆ. ಇದಲ್ಲದೆ, ಭಾರತೀಯ ಮೂಲದ ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಮ್ ಪ್ರಧಾನಿಯಾಗಿ ಆಯ್ಕೆಯಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು “ಇದೊಂದು ಬೆರಗುಗೊಳಿಸುವ ಮತ್ತು ಐತಿಹಾಸಿಕ ಸಾಧನೆ. ನಿಜಕ್ಕೂ ಗಮನಿಸಬೇಕಾದ ಅಂಶ’ ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಔತಣ ಕೂಟ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ- ಅಮೆರಿಕನ್ ಸಮುದಾಯದ 200 ಮಂದಿ ಪ್ರಮುಖರು ಇದ್ದರು.
ಅಮೆರಿಕದ ಅಭಿವೃದ್ಧಿ ಮತ್ತು ಅರ್ಥವ್ಯವಸ್ಥೆಗೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಜೆಗಳ ಕೊಡುಗೆ ಅಮೂಲ್ಯ ಎಂದು ಕೊಂಡಾಡಿದ್ದಾರೆ. ಅಮೆರಿಕದ ಮನರಂಜನಾ ವ್ಯವಸ್ಥೆ, ಮಾಹಿತಿ ನೀಡುವಿಕೆ, ಪ್ರತಿಕೂಲ ಹವಾಮಾನ ಸ್ಥಿತಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಜನರು ಕೊಡುಗೆ ನೀಡಿದ್ದಾರೆ ಎಂದು ಜೋ ಬೈಡೆನ್ ಶ್ಲಾಘಿಸಿದ್ದಾರೆ.
ಈ ಸ್ಥಾನಕ್ಕೇರಲು ತಾಯಿಯೇ ಕಾರಣ
ಇದೇ ಸಂದರ್ಭದಲ್ಲಿ ಮಾತನಾಡಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ “ಈ ಹುದ್ದೆಗೆ ಆಯ್ಕೆಯಾಗಲು ನನ್ನ ತಾಯಿ ಕಾರಣ’ ಎಂದು ಹೇಳಿದ್ದಾರೆ. ಅವರ ಧೈರ್ಯ, ಶ್ರಮ, ಬದ್ಧತೆಯಿಂದಾಗಿ ಅಮೆರಿಕದ ಉಪಾಧ್ಯಕ್ಷೆಯಾಗಿ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿದೆ’ ಎಂದರು. ಬಾಲ್ಯದಲ್ಲಿ ಚೆನ್ನೈನಲ್ಲಿ ಅಜ್ಜ ಅಜ್ಜಿಯರ ಜತೆಗೆ ದೀಪಾವಳಿ ಆಚರಿಸಿದ ನೆನಪು ಈಗಲೂ ಇದೆ ಎಂದೂ ಕಮಲಾ ಹೇಳಿದ್ದಾರೆ.