Advertisement

ಉರುಗ್ವೆಯನ್ನು ಉರುಳಿಸಿದ ಪೆರು

09:48 AM Jul 01, 2019 | keerthan |

ಸಾಲ್ವಡೋರ್‌: ಗೋಲ್‌ಕೀಪರ್‌ ಪೆಡ್ರೊ ಗಾಲೆಸ್‌ ಅವರ ಅಮೋಘ ನಿರ್ವಹಣೆಯಿಂದಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಉರುಗ್ವೆ ತಂಡವನ್ನು ಸೋಲಿಸಿದ ಪೆರು “ಕೊಪಾ ಅಮೆರಿಕ ಫ‌ುಟ್‌ಬಾಲ್‌’ ಪಂದ್ಯಾಟದಲ್ಲಿ ಸೆಮಿಫೈನಲ್‌ ಹಂತಕ್ಕೇರಿತು.

Advertisement

ಲೂಯಿಸ್‌ ಸೂರೆಜ್‌ ಅವರ ಸ್ಪಾಟ್‌ ಕಿಕ್‌ ಹೊಡೆತವನ್ನು ಗಾಲೆಸ್‌ ರಕ್ಷಿಸಿದ ಬಳಿಕ ಎಡಿಸನ್‌ ಫ್ಲೋರ್ ನಿರ್ಣಾಯಕ ಪೆನಾಲ್ಟಿಯಲ್ಲಿ ಗೋಲು ಹೊಡೆದೊಡನೆ ಪೆರು ವಿಜಯೋತ್ಸವ ಆಚರಿಸಿತು. ಇದರೊಂದಿಗೆ ಕಳೆದ 4 ಕೂಟಗಳಲ್ಲಿ ಪೆರು ಮೂರನೇ ಬಾರಿ ಸೆಮಿಫೈನಲಿಗೇರಿದ ಸಾಧನೆ ಮಾಡಿದೆ.

ಸೆಮಿಯಲ್ಲಿ ಚಿಲಿ ಎದುರಾಳಿ
ಪೆರು ಬುಧವಾರ ನಡೆಯುವ ಎರಡನೇ ಸೆಮಿಫೈನಲ್‌ ಹೋರಾಟದಲ್ಲಿ ಚಿಲಿ ತಂಡದ ಸವಾಲನ್ನು ಎದುರಿಸಲಿದೆ. ಚಿಲಿ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿಯೇ ಕೊಲಂಬಿಯವನ್ನು 5-4 ಗೋಲುಗಳಿಂದ ಸೋಲಿಸಿತ್ತು.

1939 ಮತ್ತು 1975ರಲ್ಲಿ ಪ್ರಶಸ್ತಿ ಗೆದ್ದಿರುವ ಪೆರು, 4 ವರ್ಷಗಳ ಹಿಂದೆ ನಡೆದ ಕೊಪಾ ಪಂದ್ಯಾಟದ ಸೆಮಿಫೈನಲ್‌ನಲ್ಲಿ ಚಿಲಿಗೆ ಶರಣಾಗಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶ ಪೆರುಗೆ ಲಭಿಸಿದೆ.

ಇನ್ನೊಂದು ಸೆಮಿಫೈನಲ್‌ ಪಂದ್ಯ ಆತಿಥೇಯ ಬ್ರಝಿಲ್‌ ಮತ್ತು ಆರ್ಜೆಂಟೀನಾ ತಂಡಗಳ ನಡುವೆ ನಡೆಯಲಿದೆ. ಬ್ರಝಿಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪರಗ್ವೆಯನ್ನು ಪೆನಾಲ್ಟಿ ಶೂಟೌಟ್‌ನಲ್ಲಿಯೇ ಉರುಳಿಸಿತ್ತು. ಆರ್ಜೆಂಟೀನಾ ಪಡೆ ವೆನೆಜುವೇಲ ತಂಡವನ್ನು 2-0 ಗೋಲುಗಳಿಂದ ಕೆಡವಿತ್ತು.

Advertisement

ಈ ಕೂಟದ 3 ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಿಗದಿತ ಅವಧಿಯಲ್ಲಿ ಗೋಲುರಹಿತವಾಗಿದ್ದವು ಮತ್ತು ಪೆನಾಲ್ಟಿ ಶೂಟೌಟ್‌ನಲ್ಲಿ ಫ‌ಲಿತಾಂಶ ಬಂದಿತ್ತು. ಆರ್ಜೆಂಟೀನಾ-ವೆನೆಜುವೇಲ ನಡುವಣ ಕ್ವಾರ್ಟರ್‌ ಫೈನಲ್‌ ಪಂದ್ಯ ಮಾತ್ರ ನಿಗದಿತ ಅವಧಿಯಲ್ಲಿ ಸ್ಪಷ್ಟ ಫ‌ಲಿತಾಂಶದೊಂದಿಗೆ ಮುಗಿದಿತ್ತು

Advertisement

Udayavani is now on Telegram. Click here to join our channel and stay updated with the latest news.

Next