ಬಾಲಿವುಡ್‌ನಲ್ಲಿ ರಂಗೀಲಾ, ಸತ್ಯ, ಮಸ್ತ್, ಪ್ಯಾರ್ ತುನೇ ಕ್ಯಾ ಕಿಯಾ, ಏಕ್ ಹಸೀನಾ ಥಿ ಮುಂತಾದ ಚಿತ್ರಗಳ ಮೂಲಕ ತನ್ನ ಬೋಲ್ಡ್ ಆ್ಯಂಡ್ ಗ್ಲಾಮರಸ್ ಪಾತ್ರಗಳ ಮೂಲಕ ಸಿನಿಪ್ರಿಯರ ಮನಗೆದ್ದಿದ್ದ ಚೆಲುವೆ ನಟಿ ಊರ್ಮಿಳಾ ಮಾತೋಂಡ್ಕರ್. 2016ರಲ್ಲಿ ಮದುವೆ ಆದ ಮೇಲೆ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ದರು. ಅದಾದ ಬಳಿಕ ಚಿತ್ರರಂಗದ ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಕಳೆದ ವರ್ಷ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದ ಊರ್ಮಿಳಾ, ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಅಭ್ಯರ್ಥಿಯಾಗಿ ಕೂಡ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಹೀನಾಯವಾಗಿ ಸೋತ ಊರ್ಮಿಳಾ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಒಂದಷ್ಟು ಸುದ್ದಿಯಾಗಿದ್ದರು. ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಮಹಾತ್ಮ ಗಾಂಧಿ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಮಾತಿಗಿಳಿದ ಊರ್ಮಿಳಾ, “1919ರಲ್ಲಿ ಎರಡನೇ ವಿಶ್ವಯುದ್ಧ ಮುಕ್ತಾಯಗೊಂಡ ಬಳಿಕ, ಭಾರತದಲ್ಲಿ ಅಶಾಂತಿ ಮೂಡುವುದು ಎಂದು ಬ್ರಿಟಿಷರಿಗೆ ಗೊತ್ತಿತ್ತು. ಹೀಗಾಗಿ ಅವರು ರೌಲತ್ ಕಾಯ್ದೆ ಜಾರಿಗೆ ತಂದರು. ಆ 1919ರ ರೌಲತ್ ಕಾಯ್ದೆ ಮತ್ತು 2019ರ ಸಿಎಎ, ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದೆ’ ಎಂದು ನೆರೆದಿದ್ದವರು ದಂಗು ಬಡಿಯುವಂತೆ ಮಾತನಾಡಿದ್ದರು.
ಇಷ್ಟಕ್ಕೂ 1919ರಲ್ಲಿ ಮೊದಲ ವಿಶ್ವಯುದ್ಧ ಮುಗಿದಿತ್ತು. ಎರಡನೇ ವಿಶ್ವಯುದ್ಧ ಪ್ರಾರಂಭವೇ ಆಗಿರಲಿಲ್ಲ. ಇನ್ನು ಊರ್ಮಿಳಾ ಹೇಳಿರುವ ರೌಲತ್ ಕಾಯ್ದೆಗೂ, ಸಿಎಎಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಊರ್ಮಿಳಾ ಆಡಿರುವ ಮಾತುಗಳಲ್ಲಿ ಯಾವುದೇ ಅರ್ಥವಿಲ್ಲ. ನೆರೆದಿದ್ದವರ ಮುಂದೆ ಚಪ್ಪಾಳೆ-ಶಿಳ್ಳೆ ಗಿಟ್ಟಿಸಿಕೊಳ್ಳುವ ಭರದಲ್ಲಿ ಏನೋ ಹೇಳಲು ಹೋಗಿ, ಇನ್ನೇನೋ ಹೇಳಿರುವ ಊರ್ಮಿಳಾ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಹೀಗೆ ತಪ್ಪು ಉಲ್ಲೇಖ ಮಾಡಿದ ಊರ್ಮಿಳಾ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. “ಎರಡನೆಯ ವಿಶ್ವಯುದ್ಧ ಶುರುವಾಗುವ ಮುನ್ನವೇ ಹೇಗೆ ಮುಕ್ತಾಯ ಆಯ್ತು? ರೌಲತ್ ಆಕ್ಟ್ ಗೂ ಸಿಎಎಗೂ ಇರುವ ಸಂಬಂಧ ಏನು? ನೀವು ಓದಿದ್ದು ಯಾವ ವಿಶ್ವವಿದ್ಯಾನಿಲಯದಲ್ಲಿ’ ಅಂತೆಲ್ಲಾ ಟ್ವೀಟಿಗರು ಕಾಲೆಳೆಯುತ್ತಿದ್ದಾರೆ. ಮತ್ತೂಂದೆಡೆ ಸಿಎಎ ಪರ ಹೋರಾಟಗಾರರಿಂದಲೂ ಯದ್ವಾತದ್ವಾ ಟೀಕೆ ವ್ಯಕ್ತವಾಗಿದೆ.