ವಿಜಯಪುರ: ಉರಿಗೌಡ- ನಂಜೆಗೌಡ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ನಿರ್ಮಲಾನಂದ ಶ್ರೀಗಳು ಸಚಿವ ಮುನಿರತ್ನ ಅವರೊಂದಿಗೆ ಚರ್ಚಿಸಿದ್ದಾರೆ. ಶ್ರೀಗಳು ಹೇಳಿದ್ದನ್ನೇ ಎಲ್ಲರೂ ಒಪ್ಪಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉರಿಗೌಡ, ನಂಜೇಗೌಡ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದ ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಮಾಡುವ ಬಗ್ಗೆ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ, ರಾಜ್ಯದ ಕೋರ್ ಕಮಿಟಿ ನಿರ್ಧರಿಸುತ್ತದೆ. ಅಥಣಿ ಕ್ಷೇತ್ರಕ್ಕೆ ಶಾಸಕ ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡುವ ವಿಷಯದಲ್ಲಿ ಯಾವುದೇ ಗೊಂದಲ ಉಂಟಾಗದು. ಮಾಜಿ ಸಚಿವ ಲಕ್ಷ್ಮಣ ಸವದಿ ಅವರೊಂದಿಗೂ ಈ ಬಗ್ಗೆ ಮಾತನಾಡಿದ್ದೇನೆ. ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ನಾನೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸುತ್ತೇವೆ. ಯಾವ ಸಮಸ್ಯೆಯಾಗದು, ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್
ಸಚಿವ ವಿ.ಸೋಮಣ್ಣ ಬಿಜೆಪಿ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೇಲ್ಮನೆ ಶಾಸಕ ಬಾಬುರಾವ್ ಚಿಂಚನಸೂರು ಪಕ್ಷ ತೊರೆದುದನ್ನು ಚುನಾವಣಾ ಸಂದರ್ಭದಲ್ಲಿ ಇಂಥದ್ದೆಲ್ಲ ನಡೆಯುತ್ತವೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಜನರೂ ಜಾಗೃತರಾಗಿದ್ದಾರೆ. ಜನಹಿತವಿಲ್ಲದ ಪಕ್ಷಾಂತರ ಯಾವ ಪರಿಣಾಮ ಬೀರುವುದಿಲ್ಲ ಎಂದರು.
ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿರಿಯರು, ರಾಜಕೀಯ ಅನುಭವ ಇರುವ ಅವರು ಸೂಕ್ತ ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದರು.
ರಾಜ್ಯ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸುತ್ತಿರುವ ಗ್ಯಾರಂಟಿಗಳಿಗೆ ಬೆಲೆ ಇಲ್ಲ. ಯಾವ್ಯಾವ ರಾಜ್ಯದಲ್ಲಿ ಏನೇನು ಘೋಷಿಸಿದ್ದಾರೆ, ಏನೇನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಇನ್ನೂ ಎಷ್ಟು ಗ್ಯಾರಂಟಿ ಘೋಷಣೆಗಳನ್ನಾದರೂ ಮಾಡಲಿ ಎಂದು ಕುಹಕವಾಡಿದರು.