ದೊಡ್ಡಬಳ್ಳಾಪುರ: ಹೆದ್ದಾರಿ ಕಾಮಗಾರಿ ನಡೆ ಯು ತ್ತಿರುವ ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ದಾಬಸ್‌ಪೇಟೆ -ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 207ರ ಚಿಕ್ಕಬೆಳವಂಗಲ ಸಮೀಪ ಅಂಡರ್‌ಪಾಸ್ ನಿರ್ಮಿಸುವಂತೆ ಚಿಕ್ಕಬೆಳವಂಗಲ ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದ ಬಿ.ಎನ್.ಬಚ್ಚೇಗೌಡ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.
ಸಂಸತ್ ಸದಸ್ಯರಿಗೆ ಅಂಡರ್‌ಪಾಸ್ ನಿರ್ಮಾ ಣದ ಅಗತ್ಯ ಕುರಿತು ಮನವರಿಕೆ ಮಾಡಿಕೊಟ್ಟ ಸ್ಥಳೀಯ ಮುಖಂಡರಾದ ಸಿ.ಎಚ್.ರಾಮಕೃಷ್ಣ, ಧರ್ಮೇಂದ್ರ, ವಿಜಯ ಕುಮಾರ್, ಚಿಕ್ಕಬೆಳವಂಗಲ ಗ್ರಾಮದ ಮೂಲಕ ಸಾಸಲು ಹೋಬಳಿಯ ಗ್ರಾಮಗಳು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಹೋಗಲು ನೂರಾರು ವರ್ಷಗಳಿಂದಲು ಮುಖ್ಯ ರಸ್ತೆ ಇದೇ ಆಗಿದೆ. ಈಗ ಹೆದ್ದಾರಿಯಿಂದ ಈ ರಸ್ತೆಗೆ ಬರಲು ಸ್ಥಳವೇ ಇಲ್ಲದಂತೆ ರಸ್ತೆ ಕಾಮಗಾರಿ ಮಾಡಲು ಮುಂದಾಗಿದ್ದಾರೆ.
ಚಿಕ್ಕಬೆಳವಂಗಲದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡದೇ ಇದ್ದರೆ ಸುಮಾರು ಮೂರು ಕಿ.ಮೀ ದೂರದಿಂದ ಸಾಸಲು ಹಾಗೂ ಕೊರಟಗೆರೆ ಕಡೆಗೆ ಹೋಗುವ ವಾಹನಗಳು ಸುತ್ತು ಹಾಕಿಕೊಂಡು ಬರಬೇಕಾಗಲಿದೆ. ಅಲ್ಲದೆ ಚಿಕ್ಕಬೆಳವಂಗಲ ಗ್ರಾಮದ ರೈತರು ಹೆದ್ದಾರಿಯ ಮತ್ತೂಂದು ಬದಿಯಲ್ಲಿನ ಮನೆಗಳಿಗೆ ಹಾಗೂ ಹೊಲಗಳಿಗೆ ಹೋಗಲು ಸಹ ರಸ್ತೆ ಇಲ್ಲದಂತಾಗಲಿದೆ. ಅಂಡರ್‌ಪಾಸ್ ನಿರ್ಮಾಣಕ್ಕೆ ಈಗ ಹೆಚ್ಚುವರಿ ಹಣ ಖರ್ಚಾಗುವುದನ್ನು ಮಾತ್ರ ಹೆದ್ದಾರಿ ನಿರ್ಮಾಣದ ಅಧಿಕಾರಿಗಳು ಹೇಳುತ್ತಾರೆ ವಿನಹ, ಸ್ಥಳೀಯರು ಪ್ರತಿ ದಿನ ಅನುಭವಿಸುವ ಕಷ್ಟದ ಬಗ್ಗೆ ಮಾತ್ರ ಅರ್ಥ ಮಾಡಿಕೊಳ್ಳುತ್ತಿಲ್ಲ. ಹೆದ್ದಾರಿ ಕಾಮಗಾರಿ ಪ್ರಾರಂಭಿಸುವ ಸಮಯದಲ್ಲೇ ಇಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಳ್ಳಬೇಕಾಗಿದ್ದ ಜವಾಬ್ದಾರಿ ಎಂಜಿನಿಯರ್‌ಗಳದ್ದು. ಅವರು ಮಾಡಿರುವ ತಪ್ಪಿಗೆ ನಮ್ಮ ಹೊಲಗಳಿಗೆ ಹೋಗಿ ಬರಲು ಸುತ್ತು ಹಾಕುವಂತಾಗಲಿದೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಹಾಗೂ ಸ್ಥಳೀಯರು ಇದ್ದರು.
ನಾಳೆ ಅಧಿಕಾರಿಗಳ ಜೊತೆ ಚರ್ಚೆ: ಗ್ರಾಮಸ್ಥರ ಮನವಿ ಸ್ವೀಕರಿಸಿದ ಸಂಸತ್ ಸದಸ್ಯ ಬಿ.ಎನ್.ಬಚ್ಚೇಗೌಡ ಮಾತನಾಡಿ, ಹೆದ್ದಾರಿ ಕಾಮಗಾರಿಗೆ ಯೋಜನೆ ರೂಪಿಸುವಾಗಲೇ ಎಂಜಿನಿಯರ್‌ಗಳು ಅಂಡರ್‌ಪಾಸ್ ರಸ್ತೆ ನಿರ್ಮಿಸುವ ಕುರಿತು ಹೇಳಬೇಕಿತ್ತು. ಈಗ ಅವರು ಮಾಡಿರುವ ತಪ್ಪಿಗೆ ಜನರು ಕಷ್ಟ ಅನುಭವಿಸುವಂತೆ ಆಗಬಾರದು. ಜುಲೈ 10 ರಂದು ಹೆದ್ದಾರಿ ನಿರ್ಮಾ ಣದ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲಿಯವರೆಗೂ ಚಿಕ್ಕಬೆಳವಂಗಲ ಗ್ರಾಮದ ಸಮೀಪ ರಸ್ತೆ ಕಾಮಗಾರಿ ನಡೆಸದಂತೆ ಸೂಚನೆ ನೀಡಿದರು.