Advertisement

ಕಾರ್ಯಭಾರ ಕಡಿಮೆಗೊಳಿಸಲು ಆಗ್ರಹ

11:57 AM Feb 12, 2020 | Suhan S |

ಬಾಗಲಕೋಟೆ: ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಬೇರೆ ಇಲಾಖೆಯ ಕೆಲಸ ಮತ್ತು ಮಾನಸಿಕ ಒತ್ತಡದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಪದವೀಧರ ಅಧಿಕಾರಿಗಳ ಸಂಘ ಮತ್ತು ಕರ್ನಾಟಕ ರಾಜ್ಯ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೃಷಿ ಇಲಾಖೆಯು ತಾಂತ್ರಿಕ ಇಲಾಖೆಯಾಗಿದ್ದು, ರೈತರ ಕ್ಷೇಮಾಭಿವೃದ್ಧಿ ಯೋಜನೆಗಳ ಅನುಷ್ಠಾನ ಮಾಡುವ ಕೆಲಸ ಮಾಡುತ್ತದೆ. ಆದರೆ, ಇಲಾಖೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿ ಕೊರತೆ ಇರುವುದರಿಂದ ಕೆಲಸದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೃಷಿ ಇಲಾಖೆಯ ಕೆಲಸದೊಂದಿಗೆ ಬೇರೆ ಇಲಾಖೆಯ ಕೆಲಸ ಕೂಡಾ ವಹಿಸಲಾಗುತ್ತಿದೆ. ಇದರಿಂದಾಗಿ ನೌಕರರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

2014-15ನೇ ಸಾಲಿನಲ್ಲಿ ಕೃಷಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಗಳ ಮರು ಹೊಂದಾಣಿಕೆ ಸಮಯದಲ್ಲಿ ಸಾಕಷ್ಟು ಹುದ್ದೆಗಳನ್ನು ಸರ್ಕಾರದ ಮಟ್ಟದಲ್ಲಿ ಕಡಿತಗೊಳಿಸಿ ಇಲಾಖೆಯಲ್ಲಿ ಆರ್ಥಿಕ ಭಾರ ಇಳಿಕೆ ಎನ್ನುವ ಒಂದೇ ಉದ್ದೇಶದಿಂದ ಜಿಲ್ಲಾ ಮಟ್ಟ, ತಾಲೂಕು ಮಟ್ಟ, ಹೋಬಳಿ ಮಟ್ಟ ಹಾಗೂ ಕ್ಷೇತ್ರ ಮಟ್ಟದಲ್ಲಿ ಸಹಾಯಕ ಕೃಷಿ ಅಧಿಕಾರಿಗಳ ಕೊರತೆ ಉಂಟಾಗಿದೆ. ಇದರಿಂದಾಗಿ ರೈತರಿಗೆ ಕೃಷಿ ತಂತ್ರಾಂಶ ತಲುಪಿಸುವಲ್ಲಿ ತೊಂದರೆಯಾಗುತ್ತಿದೆ ಎಂದು ದೂರಿದರು.

ಬೆಳೆ ಸಮೀಕ್ಷೆ ಯೋಜನೆ, ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ, ಕನಿಷ್ಠ ಬೆಂಬಲ ಯೋಜನೆ, ಬೆಳೆ ಕಟಾವು ಪ್ರಯೋಗಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಪಿಎಂ ಕಿಸಾನ್‌ ಸಮ್ಮಾನ ಯೋಜನೆ ಮುಂತಾದ ಯೋಜನೆಗಳ ಕೆಲಸ ಸಿಬ್ಬಂದಿಗಳ ಕೊರತೆಯಿಂದ ಇನ್ನೂ ಪೂರ್ಣಗೊಳ್ಳದೇ ಬಾಕಿ ಉಳಿದಿವೆ. ಇದಲ್ಲದೇ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಇತರೆ ಇಲಾಖೆಗಳ ಕೆಲಸ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ರೈತ ಸಂಪರ್ಕ ಕೇಂದ್ರಗಳಲ್ಲಿ ಕನಿಷ್ಠ 2 ಡಿಇಒ, ಒಬ್ಬ ಎಸ್‌ಡಿಎ ಹಾಗೂ ಒಬ್ಬ ಗ್ರೂಪ್‌ ಡಿ ನೌಕರರನ್ನು ಕಾಯಂ ನೇಮಿಸಬೇಕು. ಕ್ಷೇತ್ರ ಮಟ್ಟದಲ್ಲಿ ಸಂಚಾರ ಮಾಡಲು ವಾಹನದ ವ್ಯವಸ್ಥೆ ಮಾಡಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ನೇಮಿಸಬಾರದು. ಕೃಷಿ ಇಲಾಖೆಗೆ ಸೇರಿರುವ ಅಧಿಕಾರಿ ತನ್ನ ಸೇವಾವಧಿಯಲ್ಲಿ ಕನಿಷ್ಠ ಮೂರು ಬಾರಿಯಾದರೂ ಪದೋನ್ನತಿ ಹೊಂದಬೇಕು. ಇಲಾಖೆ ಮಟ್ಟದಲ್ಲಿ ಎಲ್ಲ ಹಂತದ ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಮರ್ಪಕವಾಗಿ ತಯಾರಿಸಿ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಉಪ ನಿರ್ದೇಶಕ ಕೊಂಗವಾಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಿ. ಬಳ್ಳಾರಿ, ರಾಜ್ಯ ಪರಿಷತ್‌ ಸದಸ್ಯ ಸಂಜೀತ ಸತ್ಯರಡ್ಡಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next