ಬಾಗೇಪಲ್ಲಿ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹಿಸಿ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಮಾ.2ರಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಅರಬೆತ್ತಲೆ ಮೆರವಣಿಗೆ ಹಾಗೂ ಅನಿರ್ದಿಷ್ಠಾವಧಿ ಧರಣಿ ನಡೆಸಲಾಗುವುದು ಎಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಜಿಪಂ ಉಪಾಧ್ಯಕ್ಷ ಎ.ವಿ.ಪೂಜಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ತಾಲೂಕು ಆಡಳಿತ ಗೊಂದಲ ಉಂಟು ಮಾಡುತ್ತಿದೆ. ಹೀಗಾಗಿ ಮಾ.2ರಂದು ತಾಪಂ ಕಾರ್ಯಾಲಯದ ಮುಂದೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ನಮ್ಮ ಸಂಘಟನೆಗಳ ಹೋರಾಟದ ಫಲವಾಗಿ 2017ರ ಮಾ.3ರಂದು ತಾಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಿರುವಂತೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾಪಂ ಆವರಣದಲ್ಲಿ ಪೂರ್ವ ಪಶ್ಚಿಮ 100 ಅಡಿ ಮತ್ತು ಉತ್ತರ ದಕ್ಷಿಣ 213 ಅಡಿಗಳ ಸ್ಥಳ ಗುರುತಿಸಿ ಆಯುಕ್ತರ ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಆದರೆ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಅಂಬೇಡ್ಕರ್ ಭವನ ನಿರ್ಮಾಣ ವಿಷಯದಲ್ಲಿ ಗೊಂದಲ ಎಬ್ಬಿಸಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಇಂದಿರಾ ಕ್ಯಾಂಟಿನ್ ಹಾಗೂ ತಾಪಂ ಆಡಳಿತ ಕಚೇರಿ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದ್ವಂದ್ವ ಧೋರಣೆ ಇದೇ ರೀತಿ ಮುಂದುವರೆದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಎಂ.ಜಿ.ಕಿರಣ್ ಕುಮಾರ್ ಮಾತನಾಡಿ, ಈ ಹಿಂದೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಿರುವಂತೆ ತಾಪಂ ಆವರಣದಲ್ಲೇ ಅಂಬೇಡ್ಕರ್ ನಿರ್ಮಾಣ ಮಾಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾ, ರಾಜ್ಯಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಅಂಬೇಡ್ಕರ್ ಭವನ ನಿರ್ಮಾಣದ ವಿಚಾರದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಬಾರದು ಎಂದರು.
ಛಲವಾದಿ ಮಹಾಸಭಾ ಅಧ್ಯಕ್ಷ ಟಿ.ರಾಮಪ್ಪ, ಜೈಭೀಮ್ ಅಖೀಲ ಭಾರತ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ನಾಗಪ್ಪ, ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಗಣೇಶ್, ದಲಿತ ಸೇನೆ ಅಧ್ಯಕ್ಷ ಮುನಿಶ್ಯಾಮಿ, ಕೆಡಿಎಸ್ ಎಸ್ ನಗರ ಶಾಖೆ ಅಧ್ಯಕ್ಷ ಗಂಗಾಧರ್ ಮತ್ತಿತರರಿದ್ದರು.