ಸುರಪುರ: ತಾಲೂಕಿನ ದೇವಾಪುರದಿಂದ ನಾಗರಾಳವರೆಗಿನ ಹೆದ್ದಾರಿ ದುರಸ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಕಾರ್ಯಕರ್ತರು ದೇವಾಪುರ ಕ್ರಾಸ್‌ನಲ್ಲಿ ಸೋಮವಾರ ಬೃಹತ್ ರಸ್ತೆ ತಡೆ ನಡೆಸಿದರು.
ದೇವಾಪುರದಿಂದ ನಾಗರಾಳವರೆಗಿನ 5 ಕಿಮೀ ರಸ್ತೆಯನ್ನು 2 ವರ್ಷಗಳಿಂದ ದುರಸ್ತಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ದೇವಾಪುರದಿಂದ ನಾಗರಾಳ ವರೆಗಿನ 5 ಕಿಮೀ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ದೊಡ್ಡ ತಗ್ಗುಗಳು ಬಿದ್ದಿವೆ. ಬೈಕ್‌ಗಳು ಕೂಡ ಚಲಿಸಲಾರದಷ್ಟು ಕೆಟ್ಟು ಹೋಗಿದೆ. ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದರು ಕೂಡ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೆ ಪ್ರಯಾಣಿಕರೊಂದಿಗೆ ಚಲ್ಲಾಟ ನಡೆಸಿದ್ದಾರೆ ಎಂದು ಆರೋಪಿಸಿದರು.
ರಸ್ತೆ ಕೆಟ್ಟು ಹೋಗಿರುವುದರಿಂದ ರಾತ್ರಿ ಬೈಕ್ ಗಳು ಗುಂಡಿಗೆ ಬಿದ್ದು ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಇಷ್ಟೆಲ್ಲ ಅವಘಡ ನಡೆದಿದ್ದರು ಕೂಡ ಲೋಕೋಪಯೋಗಿ ಇಲಾಖೆ ಇದಕ್ಕೂ ತನಗೂ ಸಂಬಂಧವಿಲ್ಲದಂತೆ ಮೌನವಹಿಸಿದೆ. ಶಾಸಕರು, ಸಚಿವರು ಇದೇ ರಸ್ತೆಯಿಂದ ಹಾದು ಹೋಗುತ್ತಾರೆ. ಆದರೆ ಯಾರೊಬ್ಬರು ಈ ಬಗ್ಗೆ ಲಕ್ಷ ವಹಿಸುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ರಸ್ತೆಗೆ ಭೂಮಿ ಕಳೆದುಕೊಂಡಿರುವವರು ಭೂ ಪರಿಹಾರಕ್ಕೆ ಒತ್ತಾಯಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಕಾಮಗಾರಿ ಬಂದ್ ಮಾಡಿಸಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಬೇಕು. ನ್ಯಾಯಾಲಯದಲ್ಲಿನ ವ್ಯಾಜ್ಯ ಇತ್ಯರ್ಥಪಡಿಸಿ ನಿರಾಶ್ರಿತರಿಗೆ ಭೂ ಪರಿಹಾರ ಕಲ್ಪಿಸಿ ರಸ್ತೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿರ್ಲಕ್ಷ್ಯ ವಹಿಸಿದಲ್ಲಿ ತಾಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಸಲ್ಲಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಡಾ| ಮಲ್ಲಿಕಾರ್ಜುನ ಆಶನಾಳ, ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾತನಾಡಿದರು. ಬಸವರಾಜ ಗೋನಾಲ, ಅಜೀಜ್ ಸಾಬ್ ಐಕೂರ, ಮರಿಲಿಂಗಪ್ಪ ಹುಣಸಿಹೊಳೆ, ಮಾನಪ್ಪ ಶೆಳ್ಳಗಿ, ಜಟ್ಟೆಪ್ಪ ನಾಗರಾಳ, ಖಾಜಾಹುಸೇನ್ ಗುಡುಗುಂಟಿ, ಶರಣಪ್ಪ ನೀರಡಗಿ, ಮಹಿಬೂಬಸಾಬ್, ಗೌತಮ ಕ್ರಾಂತಿ, ಮಹೇಶ ಯಾದಗಿರಿ, ಮಲ್ಲಪ್ಪ ವಡಿಗೇರಾ, ಬಸವರಾಜ ಶೆಳ್ಳಗಿ, ಶೇಖಪ್ಪ ಬಂಡಾರಿ, ಮಲ್ಲಪ್ಪ ಮಖಾನಾಪುರ, ಬಸವರಾಜ ಕಲ್ಲದೇವನಳ್ಳಿ, ಯಲ್ದಲಾಲಿಂಗ, ಹಣಮಂತ ಗುಡ್ಯಾಳ, ಮಹೇಶ ಸುಂಗಲಕರ್ ಇದ್ದರು.