Advertisement
ಕಾಪು: ಸ್ವಾತಂತ್ರ್ಯಪೂರ್ವದಲ್ಲಿ ಗದ್ದೆಯೊಂದರಲ್ಲಿ ಪ್ರಾರಂಭಗೊಂಡಿರುವ ಮಲ್ಲಾರು ಹಿಂದೂಸ್ಥಾನಿ (ಉರ್ದು) ಶಾಲೆಗೆ 158 ವರ್ಷಗಳ ಇತಿಹಾಸವಿದೆ. ಶಾಲಾರಂಭದ ಹೆಸರು ಬಳಿಕ ಮಲ್ಲಾರು ಸರಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡು ಗ್ರಾಮೀಣ ಭಾಗದ ಸಾವಿರಾರು ಮಂದಿ ಉರ್ದು ಭಾಷಿಕ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿದ ಹಿರಿಯ ಸರಕಾರಿ ಶಾಲೆ ಇದಾಗಿದೆ.ಮಲ್ಲಾರು ಮತ್ತು ಬೆಳಪು ಗ್ರಾಮಗಳ ಉರ್ದು ಭಾಷಿಗರನ್ನು ಕೇಂದ್ರೀಕರಿಸಿಕೊಂಡು ಪ್ರಾರಂಭಗೊಂಡಿದ್ದ ಮಲ್ಲಾರು ಸರಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಉರ್ದು ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಮಲ್ಲಾರು ಗ್ರಾಮದ ಹಿರಿಯರಾದ ಸಯ್ಯದ್ ಖ್ವಾಜಾ ಪೀರಾನ್ ಅವರು ದಾನರೂಪದಲ್ಲಿ ನೀಡಿದ್ದ ಗದ್ದೆಯಲ್ಲಿ ಪ್ರಾರಂಭಗೊಂಡ ಹಿಂದೂಸ್ಥಾನಿ ಉರ್ದು ಶಾಲೆ ಇಂದು ಸುಮಾರು ಒಂದೂವರೆ ಎಕರೆಯಷ್ಟು ವಿಸ್ತೀರ್ಣದ ಸರಕಾರೀ ಜಮೀನಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಶಾಲಾರಂಭ ಕಾಲದಲ್ಲಿ ಉರ್ದು ಮಾಧ್ಯಮದಲ್ಲಿ 5ನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದವು. ಸ್ವಾತಂತ್ರಾÂನಂತರದಲ್ಲಿ ಅಂದು ಮುಖ್ಯೋಪಾಧ್ಯಾಯರಾಗಿದ್ದ ಗೌಸ್ ಖಾನ್ ಮಾಸ್ಟರ್ ಎರ್ಮಾಳು ಇವರ ಮುತುವರ್ಜಿಯಿಂದಾಗಿ ಮಲ್ಲಾರು ಸರಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ಮತ್ತು 7 ನೇ ತರಗತಿ ಪ್ರಾರಂಭಗೊಂಡಿತು. ಅಂದು ಉರ್ದು ಭಾಷೆಯನ್ನು ಮೂಲವಾಗಿರಿಸಿಕೊಂಡು, ಉಳಿದ ಪಾಠಗಳನ್ನು ಕನ್ನಡ ಮಾಧ್ಯಮದಲ್ಲೇ ನಡೆಸಿಕೊಂಡು ಬರಲಾಗುತ್ತಿತ್ತು. 1992ರಿಂದ ಸರಕಾರಿ ಸಂಯುಕ್ತ ಪ್ರೌಢಶಾಲೆಯಾಗಿ ಇದು ಮೇಲ್ದರ್ಜೆಗೇರಿದೆ. ಸರಕಾರಿ ಸಂಯುಕ್ತ ಪ್ರೌಢಶಾಲೆಯ ಜತೆಗೆ, ಎರಡು ವರ್ಷಗಳಿಂದ ಸರಕಾರೀ ಪ್ರಾಯೋಜಿತ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯೂ ಇದೇ ಆವರಣದಲ್ಲಿ ನಡೆಸಲ್ಪಡುತ್ತಿದೆ.
Related Articles
158 ವರ್ಷಗಳಷ್ಟು ಇತಿಹಾಸವಿರುವ ಮಲ್ಲಾರು ಸರಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭದ ವರ್ಷಗಳಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. 1970-80ರ ದಶಕದಲ್ಲಿ ಪ್ರತೀ ವರ್ಷ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದ ಇತಿಹಾಸವಿದೆ. ಪ್ರಸ್ತುತ ಇಲ್ಲಿ 49 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದು, ಮುಖ್ಯ ಶಿಕ್ಷಕರೂ ಸೇರಿದಂತೆ ನಾಲ್ಕು ಮಂದಿ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಚಟುವಟಿಕೆ ನಿರತ ಶಾಲೆ ಇಲಾಖಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿ, ಕ್ರೀಡಾ ಸ್ಪರ್ಧೆಗಳ ಸಹಿತವಾಗಿ ವಿವಿಧ ಚಟುವಟಿಕೆಗಳು ಇಲ್ಲಿ ನಡೆಯುತ್ತಿದ್ದು, ಶಿಕ್ಷಕಿ ಖಾತೂನ್‌ಭೀ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿಯೂ ಲಭಿಸಿದೆ. ಪ್ರತಿಭಾ ಕಾರಂಜಿ ಸ್ಪರ್ಧೆಯ ಉರ್ದು ಭಾಷಾ ಪಠಣದಲ್ಲಿ ನಿರಂತರವಾಗಿ ಪ್ರಶಸ್ತಿ ಪಡೆಯುವ ಮೂಲಕ ಶಾಲೆ ದಾಖಲೆ ನಿರ್ಮಿಸಿದೆ. ಅಂತಾರಾಷ್ಟ್ರೀಯ ಉದ್ಯಮಿ / ಅಬೊRà ಸೀrಲ್ಸ್‌ನ ಆಡಳಿತ ನಿರ್ದೇಶಕ ಮಹಮ್ಮದ್ ಅಸ್ಲಂ ಖಾಝಿ, ನಿವೃತ್ತ ಭೂ ದಾಖಲೀಕರಣ ಅಧಿಕಾರಿ ಅಬ್ದುಲ್ ಹಖ್ ಸಾಹೇಬ್ (ಪಾಚಾ ಸಾಹೇಬ್), ಡಾ| ಅಬ್ದುಲ್ ಘನಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮ್ಯಾನೇಜರ್ ಮಹಮ್ಮದ್ ಇಕ್ಬಾಲ್, ನಿವೃತ್ತ ಸರ್ವೇಯರ್ ಅಕºರ್ ಅಲಿ ಸಹಿತ ಹಲವು ಮಂದಿ ಗಣ್ಯರು ಜ್ಞಾನಾರ್ಜನೆ ಮಾಡಿದ ಶಾಲೆ ಇದಾಗಿದೆ. ಮಲ್ಲಾರು ಸ. ಉರ್ದು ಮಾದರಿ ಹಿ. ಪ್ರಾ. ಶಾಲೆಯು ಉಡುಪಿ ಜಿಲ್ಲೆಯ ಅತೀ ಹಿರಿಯ ಉರ್ದು ಶಾಲೆಯಾಗಿದೆ. ಶಾಸಕರ ಸಹಿತವಾಗಿ ದಾನಿಗಳು ಮತ್ತು ಊರ ಪರವೂರ ಜನರ ಸಹಕಾರದೊಂದಿಗೆ ಶಾಲೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬರುತ್ತಿದ್ದೇವೆ.
-ಆದಂ ಢವಳಗಿ, ಮುಖ್ಯೋಪಾಧ್ಯಾಯರು 1990ರಲ್ಲಿ ಶಾಲೆಯ ಅಭಿವೃದ್ಧಿಗಾಗಿ ಶಾಲೆಯ ಹಳೇ ವಿದ್ಯಾರ್ಥಿಗಳು ಒಟ್ಟು ಸೇರಿ ಸೈಯ್ಯದ್ ಖ್ವಾಜಾ ಪೀರಾನ್ ಎಜ್ಯುಕೇಶನ್ ಕಮಿಟಿಯನ್ನು ಪ್ರಾರಂಭಿಸಿದ್ದು, ಕಮಿಟಿಯ ಮೂಲಕವಾಗಿ ಶಾಲೆಯ ಅಗತ್ಯತೆಗಳನ್ನು ಪೂರೈಸುತ್ತಾ ಬರುತ್ತಿದ್ದೇವೆ.
-ಶಭೀ ಅಹಮದ್ ಖಾಝಿ,
ಅಧ್ಯಕ್ಷರು, ಸೈಯ್ಯದ್ ಖ್ವಾಜಾ ಪೀರಾನ್ ಎಜ್ಯುಕೇಶನ್ ಕಮಿಟಿ (ರಿ.) ಮಲ್ಲಾರು -ರಾಕೇಶ್ ಕುಂಜೂರು