ಧಾರವಾಡ: ಮುಂಬರುವ ವರ್ಷಗಳಲ್ಲಿ ಪ್ರವಾಹ ಮತ್ತು ಬರಗಾಲದಂತಹ ದುರಂತಗಳು ಹೆಚ್ಚುತ್ತಲೇ ಹೋಗುವ ಅನಿವಾರ್ಯತೆಗೆ ನಾವು ತಲುಪಿದ್ದೇವೆ ಎಂದು ಕೃಷಿ ವಿವಿ ಹವಾಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ರವಿ ಎಚ್. ಪಾಟೀಲ ಹೇಳಿದರು.
ಕವಿಸಂನಲ್ಲಿ ವಿಜ್ಞಾನ ಮಂಟಪದ ಆಶ್ರಯದಲ್ಲಿ “ಮಳೆ ಮಳೆ ಈ ವರ್ಷ ಯಾಕಿಷ್ಟು ಮಳೆ’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತಿಕ ತಾಪಮಾನ ಹೆಚ್ಚುತ್ತಲೇ ಇರುವುದರಿಂದಾಗಿ ವಿಶ್ವದ ಮಳೆಗಾಲದ ಚಕ್ರದಲ್ಲಿ ಏರುಪೇರಾಗಿದೆ. ಇದರಿಂದ ಪ್ರವಾಹ ಮತ್ತು ಬರಗಾಲ ಹೆಚ್ಚುತ್ತ ಹೋಗುವುದೇ ಹೊರತು ಹಿಂದಿನ ವರ್ಷಗಳ ಹಾಗೆ ಸುಖೀ ಮಳೆಗಾಲದ ದಿನಗಳನ್ನು ನೆನೆಸುವ ಸ್ಥಿತಿ ಮಾತ್ರ ಬರುತ್ತದೆ. ಭೂಮಿಯ ಮೇಲ್ಪದರಿನಲ್ಲಿ ಅನೇಕ ಸೂಕ್ಷ್ಮಾಣು ಜೀವಿಗಳು ಇವೆ. ಒಂದು ಅಂಗುಲ ಮಣ್ಣು ತಯಾರಿಕೆಗೆ ನಾನೂರು ವರ್ಷಗಳೇ ಬೇಕು. ಆದರೆ ಇದು ಕೊಚ್ಚಿ ಹೋಗಲು ಒಂದು ದೊಡ್ಡ ಮಳೆಯೇ ಸಾಕು ಎಂದರು.
ಹೆದ್ದಾರಿಗಳಂತೆ ಪ್ರತಿ ನದಿ, ಹಳ್ಳ, ಕೆರೆಗಳ ಬದಿಗೆ ಗಿಡಗಳ ಮರಗಳ ಸಾಲು ಅವಶ್ಯ ಬೇಕೇಬೇಕು. ಇದರಿಂದ ಪ್ರವಾಹ ತನ್ನಿಂದತಾನೆ ನಿಯಂತ್ರಣ ಆಗುವುದಲ್ಲದೇ ಮಣ್ಣಿನ ಫಲವತ್ತತೆಯೂ ಸಹ ನಾಶವಾಗದು. ನಿಸರ್ಗದ ಸಂಗಡ ಹೊಂದಿಕೊಂಡು ಹೋದರೆ ನಷ್ಟ ಕಡಿಮೆ. ವಿರುದ್ಧ ಹೋದರೆ ಈ ವರ್ಷದ ಮಳೆಗಾಲದಂತೆ ಭಾರಿ ನಷ್ಟಕ್ಕೆ ಗುರಿಯಾಗಬೇಕಾದೀತು. ಹಳ್ಳಿಗಳಿಂದ ನಗರಕ್ಕೆ ವಲಸೆ ಬರುವವರ ಪ್ರಮಾಣ ನಿಯಂತ್ರಣದಲ್ಲಿ ಇರಬೇಕು. ನಗರಗಳಲ್ಲಿ ಯೋಜನಾ ಪ್ರಾಧಿ ಕಾರಗಳು ನಿಯಮಕ್ಕೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕವಿಸಂ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಅಧ್ಯಕ್ಷತೆ ವಹಿಸಿದ್ದರು. ಶಿವಣ್ಣ ಬೆಲ್ಲದ, ಶ್ರೀನಿವಾಸ ವಾಡಪ್ಪಿ, ರಾಜು ಪಾಟೀಲಕುಲಕರ್ಣಿ, ಮಧುಮತಿ ಸಣಕಲ್ಲ, ವೀರಣ್ಣ ಒಡ್ಡೀನ, ಜಿ.ಬಿ. ಹೊಂಬಳ, ಲಕ್ಷ್ಮಣ ಬಕ್ಕಾಯಿ ಇದ್ದರು. ಮನೋಜ ಪಾಟೀಲ ಸ್ವಾಗತಿಸಿ, ವಂದಿಸಿದರು.