Advertisement

ಲೋಕಲ್‌ ಫೈಟ್‌ಗೆ ಶಾಂತಿಯುತ ಮತದಾನ

06:20 AM Sep 01, 2018 | Team Udayavani |

ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳು, ರಾಜ್ಯದ 21 ಜಿಲ್ಲೆಗಳ 81 ತಾಲೂಕುಗಳ 102 ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನದ ವೇಳೆ ಹಲವು ಸ್ವಾರಸ್ಯಕರ ಸಂಗತಿಗಳು ಕಂಡು ಬಂದವು.

Advertisement

ದೇವದುರ್ಗ: ವಾರ್ಡ್‌ ನಂ.3ರಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಮತ್ತೂಂದು ಕೇಂದ್ರದ ಸಹಾಯಕಿ ನೇರ ಸ್ಪರ್ಧೆಗೆ ಇಳಿದಿರುವುದು ವಿಶೇಷ. ಕಾಂಗ್ರೆಸ್‌ನಿಂದ ನಿವೃತ್ತ ಶಿಕ್ಷಕ ರಂಗಪ್ಪ ಅವರ ಪತ್ನಿ, ಅಂಗನವಾಡಿ ಕಾರ್ಯಕರ್ತೆ ರಂಗಮ್ಮ ಹಾಗೂ ಪಕ್ಕದ ಕೇಂದ್ರದ ಸಹಾಯಕಿ ಶಿವಮ್ಮ ಶರಣಪ್ಪ ಮಧ್ಯೆ ಹಣಾಹಣಿ ಏರ್ಪಟ್ಟಿದೆ.

ಕೊಪ್ಪಳದಲ್ಲಿ ಲಾಠಿ ಪ್ರಹಾರ: ಕೊಪ್ಪಳ ನಗರಸಭೆ 3ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಮ್ಜದ್‌ ಪಟೇಲ ಕಳ್ಳ ಮತದಾನ ಮಾಡಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದರಿಂದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಹಣ ಹಂಚಿದ ಶಿಕ್ಷಕನ ವಿಚಾರಣೆ: ಇಳಕಲ್ಲ ಸಜ್ಜಲಗುಡ್ಡ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಗನಬಸಪ್ಪ ಲೆಕ್ಕಿಹಾಳ ಎಂಬುವರು ಇಳಕಲ್ಲ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮನೆಯೊಂದರಲ್ಲಿ ಮಹಿಳೆಯರಿಗೆ ಹಣ ಹಂಚುತ್ತಿದ್ದರು. ಹಣ ಹಂಚುತ್ತಿದ್ದ ವಿಡಿಯೋ ವೈರಲ್‌ ಆಗಿದ್ದು, ಕಾಂಗ್ರೆಸ್‌ನವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಹುನಗುಂದ ಸಿಪಿಐ ಕರುಣೇಶ ಗೌಡ, ಹಣ ಹಂಚಿದ ಶಿಕ್ಷಕ ಹಾಗೂ ಹಣ ಪಡೆದರು ಎನ್ನಲಾದ ಮಹಿಳೆಯರ ವಿಚಾರಣೆ ನಡೆಸಿದರು.

ಮತದಾನ ಮಾಡಿದ ಬಾಣಂತಿ: ಹುನಗುಂದದ ಪುರಸಭೆ ವಾರ್ಡ್‌ ನಂ.10ರಲ್ಲಿ 4 ದಿನಗಳ ಬಾಣಂತಿ ಮಹಾದೇವಿ ದೇವರಡ್ಡಿ ಎಂಬುವರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.

Advertisement

ಹೃದಯಾಘಾತ: ವೃದ್ಧೆಸಾವು: ಮಾನ್ವಿ ಪಟ್ಟಣದ ಪುರಸಭೆ ಚುನಾವಣೆಗೆ ವಾರ್ಡ್‌ ಸಂಖ್ಯೆ 14ರಲ್ಲಿ ಮತ ಹಾಕಿ ಹೊರ ಬರುತ್ತಿದ್ದ ಡಿ.ಸತ್ಯವತಿ (60) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮತದಾನ ವಂಚಿತ ಸುತ್ತೂರು ಶ್ರೀ,ಎಸ್‌.ಎಲ್‌.ಭೈರಪ್ಪ, ನಿವೇದಿತಾ 
ಮೈಸೂರು:
ಅಕ್ಕ ಸಮ್ಮೇಳನದ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸದಲ್ಲಿರುವ ಕಾರಣ ಸುತ್ತೂರು ಶ್ರೀಗಳು ಪಾಲಿಕೆ ಚುನಾವಣೆಯಿಂದ ದೂರ ಉಳಿದರು. ಇವರೊಂದಿಗೆ ವಿದೇಶ ಪ್ರವಾಸದಲ್ಲಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಕೂಡ ಹಕ್ಕು
ಚಲಾವಣೆಯಿಂದ ದೂರ ಉಳಿದರು. ಈ ಮಧ್ಯೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈಸೂರು ಜಿಲ್ಲೆಗೆ ಮತದಾನ ಜಾಗೃತಿ ರಾಯಭಾರಿಯಾಗಿ “ಮತದಾನ ಮಾಡಿದವನೇ ನಿಜವಾದ ಬಿಗ್‌ಬಾಸ್‌’ ಎನ್ನುತ್ತಾ ನಾಗರಿಕರಲ್ಲಿ ಮತಜಾಗೃತಿ ಮೂಡಿಸಿದ್ದ ಬಿಗ್‌ಬಾಸ್‌ ಖ್ಯಾತಿಯ ನಿವೇದಿತಗೌಡ, ಈ ಬಾರಿ ಮತ ಚಲಾಯಿಸಲಿಲ್ಲ. ತಮ್ಮ ಗೊಂಬೆ ಆಲ್ಬಂ ಸಾಂಗ್‌ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಕುಟುಂಬ ಸಮೇತ ಅವರು ಬೆಂಗಳೂರಿನಲ್ಲಿದ್ದರು. 

ನಗದು, ಬೆಳ್ಳಿ ದೀಪ ವಶ: ಮೈಸೂರು ವಾರ್ಡ್‌ ನಂ 6ರ ವ್ಯಾಪ್ತಿಯ ಗೋಕುಲಂನ ಕಾಂಟೂರ್‌ ರಸ್ತೆ ಬಳಿ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನಲ್ಲಿ ಬಂದು ಯೋಗೇಶ್‌ ಎಂಬಾತ ಹಣ ಹಂಚುತ್ತಿದ್ದ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯೋಗೇಶನನ್ನು ಬಂಧಿಸಿ ಆತನಿಂದ 3.14 ಲಕ್ಷ ರೂ.ನಗದು ಮತ್ತು ಮೂರು ಬೆಳ್ಳಿದೀಪಗಳನ್ನು      ವಶಪಡಿಸಿಕೊಂಡಿದ್ದಾರೆ. ವಾರ್ಡ್‌ 6ರ ಜೆಡಿಎಸ್‌ ಅಭ್ಯರ್ಥಿ ಎಸ್‌.ಬಿ.ಎಂ. ಮಂಜು ಅವರಿಗೆ ಇದು ಸೇರಿದ್ದು ಎನ್ನಲಾಗಿದೆ.

ಕಾಲಿಗೆ ಬಿದ್ದ ಅಭ್ಯರ್ಥಿ: ಮೈಸೂರಿನ ಅಗ್ರಹಾರದ ಶ್ರೀಕಾಂತ ಮಹಿಳಾ ಕಾಲೇಜಿನಲ್ಲಿ ತೆರೆಯಲಾಗಿದ್ದ ಪಾಲಿಕೆ ವಾರ್ಡ್‌ ಸಂಖ್ಯೆ 51ರ ಮತಗಟ್ಟೆ 547ರಲ್ಲಿ ಪ್ರಮೋದಾದೇವಿ ಒಡೆಯರ್‌ ಅವರು ಮತದಾನ ಮಾಡಲು ಆಗಮಿಸಿದಾಗ, ಸ್ಥಳದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಾಥ್‌ ಬಾಬು, ಪ್ರಮೋದಾದೇವಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು.

ಆ್ಯಂಬುಲೆನ್ಸ್‌ನಲ್ಲಿ ಬಂದ ವೃದ್ಧೆ
ಉಡುಪಿ ಜಿಲ್ಲೆಯ ಕೋಟ ಸಮೀಪದ ಕಾರ್ತಟ್ಟು ವಾರ್ಡ್‌ನಲ್ಲಿ 90 ವರ್ಷದ ರುದ್ರಮ್ಮ ಶೆಡ್ತಿ ಎಂಬುವರು ಕೋಟ ಜೀವನ್‌ಮಿತ್ರ ಆ್ಯಂಬುಲೆನ್ಸ್‌ ಮೂಲಕ ಮತಗಟ್ಟೆಗೆ ಬಂದು ಮತ ಚಲಾಯಿಸಿ ಆಸ್ಪತ್ರೆಗೆ ವಾಪಸ್ಸಾದರು.

ಪರದಾಡಿದ ಸಿಬ್ಬಂದಿ: ಉಳ್ಳಾಲ ಸಮೀಪದ ಕಲ್ಲಾಪು ಪಟ್ಲ ಮತದಾನ ಕೇಂದ್ರದ ಸಿಬ್ಬಂದಿ ಮತ್ತು ಪೊಲೀಸರು ಶುಕ್ರವಾರ ಮಧ್ಯಾಹ್ನ ಸರಿಯಾದ ಸಮಯಕ್ಕೆ ಆಹಾರ ಸಿಗದೆ ಪರದಾಡಿದರು. ಸೂಕ್ಷ್ಮ ಮತಗಟ್ಟೆಯಾದ ಇಲ್ಲಿಗೆ ಹೆಚ್ಚುವರಿ ಪೊಲೀಸರು ಆಗಮಿಸಿದ್ದರಿಂದ ಆಹಾರದ ಕೊರತೆ ಉಂಟಾಗಿತ್ತು. ಬಳಿಕ, ಉಳ್ಳಾಲ ಠಾಣೆಯ ಪೊಲೀಸ್‌ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದ ಪೊಲೀಸರಿಗೆ ತಮ್ಮದೇ ಖರ್ಚಿನಲ್ಲಿ ಆಹಾರ ತರಿಸಿದರು.ಇಲ್ಲಿನ ಮತದಾನ ಕೇಂದ್ರದಲ್ಲಿ ಗರ್ಭಿಣಿಯೊಬ್ಬಳು ಸಿಬ್ಬಂದಿಯಾಗಿದ್ದು, ಅವರೂ ಆಹಾರದ ಕೊರತೆಯಿಂದ ತೊಂದರೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next