Advertisement

ನಗರ ಸೂಚ್ಯಂಕ ಪಟ್ಟಿ: ಹೆಚ್ಚಿದ ನಗರಾಡಳಿತಗಳ ಹೊಣೆಗಾರಿಕೆ

02:41 AM Mar 06, 2021 | Team Udayavani |

ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ಸುಲಲಿತ ಜೀವನ ಸೂಚ್ಯಂಕ ಪಟ್ಟಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಪ್ರಮುಖ ನಗರಗಳನ್ನು ಹಿಂದಿಕ್ಕಿ ಸಿಲಿಕಾನ್‌ ಸಿಟಿ ಈ ಮಹತ್ತರ ಸಾಧನೆಗೈದಿದ್ದು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ 37ನೇ ಸ್ಥಾನ ಗಳಿಸಿದೆ. ಇನ್ನು 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ದಾವಣಗೆರೆ(9), ಮಂಗಳೂರು(20), ತುಮಕೂರು(23), ಶಿವಮೊಗ್ಗ(26) ಮತ್ತು ಬೆಳಗಾವಿ (47) ಕಾಣಿಸಿ ಕೊಂಡಿದೆ. ನಗರಸಭೆ ನಿರ್ವಹಣೆ ಸೂಚ್ಯಂಕ ಪಟ್ಟಿಯಲ್ಲಿಯೂ ರಾಜ್ಯದ ಕೆಲವೊಂದು ನಗರಗಳು ಸ್ಥಾನ ಪಡೆದುಕೊಂಡಿವೆ.

Advertisement

ಸುಲಲಿತ ಜೀವನ ಹಾಗೂ ನಗರಸಭೆ ನಿರ್ವಹಣೆ ಸೂಚ್ಯಂಕ ಪಟ್ಟಿಗಳಲ್ಲಿ ಈ ಬಾರಿ ರಾಜ್ಯದ ಹಲವು ನಗರಗಳು ಕಾಣಿಸಿಕೊಂಡಿರುವುದು ವಿಶೇಷ. ಸಂತಸದ ಸಂಗತಿಯೂ ಸಹ.

ದೇಶದ ಇತರ ಬೃಹತ್‌ ಹಾಗೂ ಎರಡನೇ ಮತ್ತು ತೃತೀಯ ಸ್ತರದ ನಗರಗಳಿಗೆ ಹೋಲಿಸಿದಲ್ಲಿ ರಾಜ್ಯದ ನಗರಗಳ ಒಟ್ಟಾರೆ ಪರಿಸ್ಥಿತಿ ಒಂದಿಷ್ಟು ಆಶಾದಾಯಕ ಎನ್ನಲು ಯಾವುದೇ ಸಮೀಕ್ಷೆ ಅಥವಾ ಭೂತಗನ್ನಡಿಯ ಅಗತ್ಯವಿಲ್ಲ. ಆದರೆ ಈ ಸಮೀಕ್ಷೆಯ ಫ‌ಲಿತಾಂಶ ಆಧರಿಸಿ ಎರಡು ಕೆಲಸಗಳನ್ನು ಮಾಡಲು ಸರಕಾರಕ್ಕೆ ಹಾಗೂ ಜಿಲ್ಲಾಡಳಿತಗಳಿಗೆ ಅವಕಾಶವಿದೆ.

ಮೊದಲನೆಯದಾಗಿ ರಾಜ್ಯದ ಇತರ ನಗರಗಳನ್ನು ಧನಾತ್ಮಕ ಅಭಿವೃದ್ಧಿಯ ದಿಸೆಯಲ್ಲಿ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿಗೆ ಸಮನಾಗಿ ಅಭಿವೃದ್ಧಿಪಡಿಸುವುದು. ಎರಡನೆಯದಾಗಿ ಬೆಂಗಳೂರನ್ನು ನಿಜವಾದ ಅರ್ಥದಲ್ಲಿ ಇನ್ನಷ್ಟು ಸುಂದರ ಹಾಗೂ ಸುಲಲಿತಗೊಳಿಸುವುದು. ಇವೆರಡೂ ಸಾಧ್ಯವಾಗಲಿಕ್ಕೆ ಈ ಸಮೀಕ್ಷೆ ಒಂದು ಆರಂಭಬಿಂದುವಾದರೆ ನಿಜಕ್ಕೂ ಅರ್ಥಪೂರ್ಣ.

ಯಾವುದೇ ನಗರ ಅಥವಾ ಪ್ರದೇಶ ಬೆಳೆದಂತೆ ಮತ್ತು ಅಲ್ಲಿನ ಜನಸಂಖ್ಯೆ ಹೆಚ್ಚಾದಂತೆ ಮೂಲಸೌಕರ್ಯಗಳೂ ಪೂರಕವಾಗಿ ಅಭಿವೃದ್ಧಿಗೊಳ್ಳಬೇಕು. ಇದಕ್ಕೆ ವಿರುದ್ಧವಾದ ಸಂದರ್ಭಗಳು ನಮ್ಮ ನಗರಗಳಲ್ಲಿ ಇಂದು ಇವೆ. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ವೃದ್ಧಿ ನಿರಂತರ ಪ್ರಕ್ರಿಯೆಯಾಗಿದ್ದು ಇದರತ್ತ ಸದಾ ಲಕ್ಷ್ಯ ಹರಿಸಬೇಕಾದುದು ಸರಕಾರದ ಆದ್ಯ ಕರ್ತವ್ಯ. ನಗರಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆಗಳನ್ನು ಅನುಷ್ಠಾನ ಗೊಳಿಸುವಾಗ ಕನಿಷ್ಠ 25 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು. ಹೀಗಾದಾಗ ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಿ ಈ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳಲು ಸಾಧ್ಯ.

Advertisement

ತಾಂತ್ರಿಕವಾಗಿ ಸುಲಲಿತ ಜೀವನ ಸೂಚ್ಯಂಕ ಪಟ್ಟಿಯಲ್ಲಿ ನಮ್ಮ ನಗರಗಳು ಸ್ಥಾನ ಪಡೆದಿರುವುದು ರಾಜ್ಯಕ್ಕೆ ಹೂಡಿಕೆದಾರರು ಮತ್ತು ಉದ್ಯಮಗಳನ್ನು ಸೆಳೆಯಲು ಸಹಾಯಕವಾಗಬಲ್ಲುದು. ನಾಗರಿಕರ ಯೋಗಕ್ಷೇಮದ ಜತೆಜತೆಯಲ್ಲಿ ಸುಸ್ಥಿರ ಅಭಿವೃದ್ಧಿಯ ದಿಸೆಯಲ್ಲಿ ಹೆಜ್ಜೆ ಇಡಲು ಇದು ಸಹಕಾರಿಯಾದೀತು. ಇದರಿಂದ ನಗರಾಡಳಿತಗಳ ನಡುವೆ ಒಂದಿಷ್ಟು ಆರೋಗ್ಯಕರ ಪೈಪೋಟಿ ಏರ್ಪಟ್ಟಲ್ಲಿ ಅದೂ ಸ್ವಾಗತಾರ್ಹವೇ. ಒಟ್ಟಿನಲ್ಲಿ ಈ ಸೂಚ್ಯಂಕ ಪಟ್ಟಿ ನಗರಾಡಳಿತ ಸಂಸ್ಥೆಗಳು ಮತ್ತು ಸರಕಾರದ ಮೇಲಿನ ಹೊಣೆಗಾರಿಕೆಯನ್ನು ಮತ್ತು ಸಾರ್ವಜನಿಕರ ಬದ್ಧತೆಯನ್ನು ಹೆಚ್ಚಿಸಿರುವುದಂತೂ ಸ್ಪಷ್ಟ.

Advertisement

Udayavani is now on Telegram. Click here to join our channel and stay updated with the latest news.

Next