Advertisement

15 ತಿಂಗಳಲ್ಲಿ ಹೊಸ ಬಡಾವಣೆ ನಿರ್ಮಾಣ ಪೂರ್ಣ 

04:22 PM Jun 06, 2023 | Team Udayavani |

ಹಾಸನ: ನಗರದ ಹೊರವಲಯ ಬೂವನಹಳ್ಳಿ, ಕೆಂಚ ಟ್ಟಹಳ್ಳಿ, ಸಮುದ್ರವಳ್ಳಿ ಬಳಿ ಹಾಸನ ನಗರಾಭಿವೃದ್ಧಿ ಪ್ರಾಧಿ ಕಾರ ನಿರ್ಮಿಸುತ್ತಿರುವ ವಸತಿ ಬಡಾವಣೆಯ ನಿರ್ಮಾಣ ಒಂದೂವರೆ ವರ್ಷದಲ್ಲಿ ಪೂರ್ಣವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಭೂ ಮಾಲಿಕರು ಮತ್ತು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಶೇ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯ ಒಪ್ಪಂದದಂತೆ 980 ಕೋಟಿ ರೂ.ನಲ್ಲಿ 1000 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

ಒಂದೂವರೆ ವರ್ಷದಲ್ಲಿ ಬಡಾವಣೆ ನಿರ್ಮಾಣ: ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದ್ದು, ಈವರೆಗೆ 200 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. 24 ತಿಂಗಳಲ್ಲಿ ಬಡಾವಣೆಯ ಎಲ್ಲ ಕಾಮಗಾರಿ ಪೂರ್ಣಗೊಳಿಸುವ ಷರತ್ತು ವಿಧಿಸಿದ್ದು, ಈಗಾಗಲೇ 7 ತಿಂಗಳು ಕಳೆದಿವೆ. ಇನ್ನು ಒಂದೂವರೆ ವರ್ಷದಲ್ಲಿ ಬಡಾವಣೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಅಧಿಕಾರಿಗಳಿಗೆ ತಿಳಿಸಿದ್ದೇವೆ: ಹೊಸ ಬಡಾವಣೆಯಲ್ಲಿ ನಿವೇಶನ ಕೋರಿ 27,778 ಅರ್ಜಿ ಬಂದಿವೆ. 16,000 ನಿವೇಶನ ನಿರ್ಮಾಣ ಮಾಡಬಹುದಾಗಿದೆ. ಇನ್ನುಳಿದ 11,000 ಅರ್ಜಿದಾರರಿಗೂ ನಿವೇಶನ ಹಂಚಿಕೆಗೆ ಹೊಸ ಬಡಾವಣೆ ನಿರ್ಮಾಣ ಮಾಡಲು 50:50 ಅನುಪಾತದಲ್ಲಿ ಭೂಮಿ ಪಡೆಯಲು ಭೂ ಮಾಲಿಕರೊಂದಿಗೆ ಮಾತುಕತೆ ನಡೆಸುವಂತೆ ಸ್ಥಳೀಯ ಶಾಸಕರು ಹಾಗೂ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.

ಅಕ್ರಮ ನಡೆದಿದ್ರೆ ಕ್ರಮ: ಹೊಸ ಬಡಾವಣೆ ನಿರ್ಮಾಣದ ಯೋಜನಾ ವೆಚ್ಚವನ್ನು ಉದ್ದೇಶಪೂರ್ವಕವಾಗಿ 600 ಕೋಟಿ ರೂ.ನಿಂದ 980 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

ಅಧಿಕಾರಿಗಳ ಎತ್ತಂಗಡಿಗೆ ನಿರ್ಧಾರ: ನಗರಾಭಿವೃದ್ಧಿ ಇಲಾಖೆಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿರುವ ಅಧಿಕಾರಿಗಳು, ನೌಕರರನ್ನು ವರ್ಗಾವಣೆ ಮಾಡಲಾಗುವುದು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತಾರು ವರ್ಷಗಳಿಂದಲೂ ಅಧಿಕಾರಿಗಳು ವರ್ಗಾವಣೆಯೇ ಆಗಿಲ್ಲ ಎಂಬ ಮಾಹಿತಿ ಇದ್ದು, ಒಂದೇ ಕಡೆ ದೀರ್ಘಾವಧಿಯ ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಗುರ್ತಿಸಿ ಗರಿಷ್ಠ ಮೂರು ವರ್ಷ ಪೂರೈಸಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಿಬ್ಬಂದಿ ನೇಮಕಕ್ಕೆ ಕ್ರಮ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ, ಹಾಸನ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಸ್ಥಳೀಯ ಶಾಸಕರು ಗಮನಸೆಳೆದಿದ್ದಾರೆ. ಅಗತ್ಯದಷ್ಟು ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕುಡಿಯುವ ನೀರಿನ ಯೋಜನೆ: ಹಾಸನ ನಗರಕ್ಕೆ ಅಮೃತ್‌ ಯೋಜನೆ -1ರಲ್ಲಿ ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಈಗ 15 ವಾರ್ಡ್‌ಗಳಿಗೆ ಮಾತ್ರ ಹೇಮಾವತಿ ನದಿ ನೀರು ಪೂರೈಕೆಯಾಗುತ್ತಿದೆ. ಇನ್ನುಳಿದ 19 ವಾರ್ಡ್‌ಗಳಿಗೆ ಹೇಮಾವತಿ ನದಿಯ ನೀರು ಪೂರೈಕೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಜೊತೆಗೆ ಒಳ ಚರಂಡಿ ಯೋಜನೆ ಅನುಷ್ಠಾನದ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

2 ನಗರಗಳ ಅಭಿವೃದ್ಧಿಗೆ ಬದ್ಧ: ಜಿಲ್ಲೆಯಲ್ಲಿ ಹಾಸನ ಮತ್ತು ಅರಸೀಕೆರೆ ಸೇರಿ ಎರಡು ನಗರಾಭಿವೃದ್ಧಿ ಪ್ರಾಧಿಕಾರಗಳಿದ್ದು, ಎರಡೂ ಪ್ರಾಧಿಕಾರಿಗಳ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ನಗರಗಳ ಅಭಿವೃದ್ಧಿಗೆ ಬದ್ಧರಿರುವುದಾಗಿ ತಿಳಿಸಿದರು.

ಹಾಸನ ಕ್ಷೇತ್ರದ ಶಾಸಕರು ಕೆಲವು ಸಮಸ್ಯೆಗಳನ್ನು ಹೇಳಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಡಿಯಲು ನಿರ್ಧರಿಸಿದ್ದೇವೆ. ಬುಧವಾರ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಹಾಸನಕ್ಕೆ ಒಳ್ಳೆಯದಾಗಬೇಕು, ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ಸರ್ಕಾರದ ಅವಧಿಯಲ್ಲಿ ನಗರಸಭೆ ವ್ಯಾಪ್ತಿಗೆ ಸೇರಿದ 25 ಗ್ರಾಮಗಳ ಆಸ್ತಿ ಖಾತೆ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಮಾತನಾಡಿ, ಶೀಘ್ರ ಪರಿಹರಿಸುವುದಾಗಿ ಹೇಳಿದರು.

ಸಭೆಯಲ್ಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎಚ್‌.ಪಿ.ಸ್ವರೂಪ್‌, ಜಿಲ್ಲಾಧಿಕಾರಿ ಅರ್ಚನಾ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಸಭೆ ಬಳಿಕ ನೂತನ ಬಡಾವಣೆಗೆ ತೆರಳಿದ ಸಚಿವರು, ಕಾಮಗಾರಿ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next