Advertisement

ನಗರಾಭಿವೃದ್ಧಿ ಪ್ರಾಧಿಕಾರಗಳು ಜನಸ್ನೇಹಿಯಾಗಿರಲಿ

07:36 AM Feb 26, 2019 | Team Udayavani |

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರಗಳು ಇನ್ನಷ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು  ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್‌ ಅವರು ಸೂಚನೆ ನೀಡಿದರು. ನಗರದ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ಕಚೇರಿಯಲ್ಲಿ ಸೋಮವಾರ  ಆಯೋಜಿಸಿದ್ದ ಹುಡಾ ಅದಾಲತ್‌ನಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು,  ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗುವ  ನೂತನ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. 

Advertisement

ನಿವೇಶನಕ್ಕೆ ಮೂಲ ಸೌಕರ್ಯ ಅಗತ್ಯ: ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಇರುವಂತಹ ನಿವೇಶನವನ್ನು ಮಾತ್ರವೇ ಮಾರಾಟ ಮಾಡಬೇಕು. ಖಾಸಗಿಯವರಾಗಲಿ, ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಕರ್ನಾಟಕ ಗೃಹ ಮಂಡಳಿಯಾಗಲಿ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ಕಲ್ಪಿಸಿದ ನಂತರವಷ್ಟೇ ನಿವೇಶನಗಳನ್ನು ಮಾರಾಟ ಮಾಡಬೇಕು. ಶೇ.100ರಷ್ಟು ಮೂಲಭೂತ ಸೌಕರ್ಯವಿರುವ ನಿವೇಶನಗಳನ್ನು ಮಾತ್ರವೇ ಮಾರಾಟ ಮಾಡಿ ಸಮಸ್ಯೆಗಳಿರುವಂತಹ ನಿವೇಶನ ಜಾಗಗಳನ್ನು ಮಾರಾಟ ಮಾಡಬೇಡಿ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಹವಾಲು ಸ್ವೀಕಾರ: ಸುಮಾರು 30 ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ ಅಹವಾಲುಗಳನ್ನು ಆಲಿಸಿದ  ಅವರು  ಇಂದು ಸಾಕಷ್ಟು ಸಮಸ್ಯೆಗಳ ಕುರಿತು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ರಸ್ತೆ ನಿರ್ಮಾಣ, ಮನೆ ನಿರ್ಮಾಣದ ಜಾಗದಲ್ಲಿ ಪಾರ್ಕ್‌ ವ್ಯವಸ್ಥೆಗೆ ಮುಂದಾಗಿರುವುದು ಸೇರಿದಂತೆ ಹಲವು ರೀತಿಯ ಕುಂದು ಕೊರತೆಗಳು ಕೇಳಿ ಬಂದಿವೆ.  ಅಧಿಕಾರಿಗಳು ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಇತ್ಯರ್ಥ ಪಡಿಸಬೇಕು ಎಂದು ಸಚಿವರು  ಸೂಚನೆ ನೀಡಿದರು.

ಡೀಸಿ ಮೂಲಕ ತನಿಖೆ ನಡೆಸಿ: ಕೆಲ ಅರ್ಜಿಗಳಲ್ಲಿ ಮೂಲ ದಾಖಲೆಗಳು ಸರಿಯಾಗಿ ಇರದ ಕಾರಣ ಅಂತಹ ದಾಖಲಾತಿ ಇಲ್ಲದ ಅರ್ಜಿಗಳನ್ನು  ಪರಿಶೀಲಿಸಿ ಜಾಗಗಳ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಅವುಗಳನ್ನು  ಜಿಲ್ಲಾಧಿಕಾರಿಗಳ ಮೂಲಕ ಪರಿಶೀಲಿಸಿ ತನಿಖೆ ನಡೆಸಬೇಕು. ಶಾಸಕ ಪ್ರೀತಂ.ಜೆ.ಗೌಡ ಮಾತನಾಡಿ ಅರ್ಹ ಫ‌ಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಖಾತೆಗಳನ್ನು ಮಾಡಿಕೊಡಬೇಕು.

ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೆಚ್ಚಿನ ವಿವೇಚನೆ ಮತ್ತು ಬದ್ದತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.  ನಿವೇಶನಗಳನ್ನು ಖರೀದಿಸಿದ ಜನರು ಸಚಿವರ ಮುಂದೆ ತಮ್ಮ ಸಮಸ್ಯೆಗಳನ್ನು ನಿವಾರಿಸುವಂತೆ ಅಳಲು ತೋಡಿಕೊಂಡರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ‌ ಶ್ವೇತಾ ದೇವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್‌ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

Advertisement

ಭೂ ಪರಿಹಾರಕ್ಕೆ ಹೂಡ ಕಚೇರಿ ಬಳಿ ರೈತರ ಧರಣಿ 
ಹಾಸನ:
ನಗರದ ಬಿ.ಎಂ.ರಸ್ತೆ ಎಪಿಎಂಸಿ ಮುಂಭಾಗದಿಂದ ವರ್ತಲ ರಸ್ತೆಗೆ ಸೇರುವ  80 ಅಡಿ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಮತ್ತು ವರ್ತುಲ ರಸ್ತೆ ನಿರ್ಮಾಣಕ್ಕೆ ಗುರ್ತಿಸಿರುವ ಭೂಮಿಗೂ ಪರಿಹಾರ ನೀಡುವಂತೆ ಆಗ್ರಹಿಸಿ ತಮ್ಲಾಪುರ-ಉದ್ದೂರು ಗ್ರಾಮಸ್ಥರು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. 

ಸ್ಥಳಕ್ಕಾಗಮಿಸಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಮತ್ತು ಶಾಸಕ ಪ್ರೀತಂ ಜೆ.ಗೌಡ, ಜಿಪಂ ಅಧ್ಯಕ್ಷೆ ಬಿ.ಎಸ್‌ಶ್ವೇತಾ ಅವರೆದರು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡು ಭೂ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. 

ಭೂಮಿಗೆ ಪರಿಹಾರ ನೀಡಿ: ಹಾಸನದ ಡೇರಿ ಸರ್ಕಲ್‌ನಿಂದ 110 ಅಡಿ ಬೈಪಾಸ್‌ ರಸ್ತೆಯು ಬೇಲೂರು, ಚಿಕ್ಕಮಗಳೂರು ರಸ್ತೆಗೆ ಹೊಂದಿಕೊಂಡು ರೇಷ್ಮೆ ಇಲಾಖೆ ಮುಂಭಾಗ ಮಂಗಳೂರು, ಬೆಂಗಳೂರು ರಸ್ತೆಗೆ ಸೇರುತ್ತದೆ. ಸುಮಾರು 10 ಕಿ.ಮೀ.ಉದ್ದದ  110 ಅಡಿ ಅಗಲವಿರುವ ವರ್ತುಲ ರಸ್ತೆಯು ಈಗ ಡೇರಿ ಸರ್ಕಲ್‌ನಿಂದ ಸಾಲಗಾಮೆ ರಸ್ತೆವರೆಗೆ ನಿರ್ಮಾಣವಾಗಿದೆ.

ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆವರೆಗೂ ವರ್ತುಲ ರಸ್ತೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡಿ ಕಾಮಗಾರಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ನಗರದ ಬಿ.ಎಂ.ರಸ್ತೆ ಎಪಿಎಂಸಿ ಮುಂಭಾಗದಿಂದ ವರ್ತಲ ರಸ್ತೆಗೆ ಸೇರುವ ಸುಆಮರು 3 ಕಿ.ಮೀ.ಉದ್ದದ  80 ಅಡಿ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಆದರೆ ಭೂ ಪರಿಹಾರ ನೀಡಿಲ್ಲ. 

ಧರಣಿ ಎಚ್ಚರಿಕೆ: ವರ್ತುಲ ರಸ್ತೆ ಹಾಗೂ  80 ಅಡಿ ರಸ್ತೆ ನಿರ್ಮಾಣಕ್ಕೆ ಸ್ವಾಧಿನವಾಗಿರುವ ಭೂಮಿಗೆ ಪರಿಹಾರ ನೀಡಬೇಕು. ಪರಿಹಾರ  ಅನಿರ್ಧಿಷ್ಟಾವಧಿಯ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನಾಕಾರರ ಅಹವಾಲು ಆಲಿಸಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಅವರು ಸೂಕ್ತ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ತಮ್ಲಾಪುರ-ಉದ್ದೂರು ಗ್ರಾಮಸ್ಥರಾದ ವಿನಯಗಾಂಧಿ, ಸುಶೀಲಮ್ಮ, ಮಂಜಮ್ಮ, ಪಾರ್ವತಿ, ಶಿವಣ್ಣ, ನಿಂಗೇಗೌಡ, ಶಿವೇಗೌಡ, ಗೌಡೇಗೌಡ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next