ಕಲಬುರಗಿ: ಇಂದು (ಏ.23) ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ನಿರ್ಭಿತಿಯಿಂದ ಮತ ಚಲಾವಣೆಯಲ್ಲಿ ಪಾಲ್ಗೊಳ್ಳಲು ಭದ್ರತೆಯ ಸಂದೇಶ ರವಾನಿಸಲು ಸೋಮವಾರ ಭದ್ರತಾ ಸಿಬ್ಬಂದಿಯಿಂದ ನಗರ ಪ್ರದಕ್ಷಣೆ ನಡೆಯಿತು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ನೇತೃತ್ವದಲ್ಲಿ ನಡೆದ ನಗರ ಪ್ರದಕ್ಷಣೆಯಲ್ಲಿ ಸುಮಾರು 500ಕ್ಕಿಂತ ಹೆಚ್ಚಿನ ಭದ್ರತಾ ಸಿಬ್ಬಂದಿ ಭಾಗವಹಿಸಿದ್ದರು.
ಜಿಲ್ಲಾದ್ಯಂತ ಸಾರ್ವಜನಿಕರು ಯಾವುದೇ ಆಮಿಷ, ಪ್ರಭಾವಕ್ಕೊಳಗಾಗದೇ ನಿರ್ಭಿತಿಯಿಂದ ಮತದಾನ ಮಾಡುವ ಮೂಲಕ ತಮ್ಮ ಮತದ ಹಕ್ಕನ್ನು ಚಲಾಯಿಸಬೇಕು. ಚುನಾವಣಾ ಕಾರ್ಯಕ್ಕೆ ಅಡ್ಡಿಪಡಿಸುವ ಸುಳ್ಳು ವದಂತಿ ಹರಡಿದ್ದಲ್ಲಿ ಅಥವಾ ದೊಂಬಿ, ಗಲಭೆಗೆ ಕಾರಣವಾಗಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
Advertisement
ನಗರದ ಜಗತ್ ವೃತ್ತದಿಂದ ಮುಸ್ಲಿಂ ಚೌಕ್, ಹುಮನಾಬಾದ ಬೇಸ್, ಕಿರಾಣಾ ಬಜಾರ ಮಾರ್ಗವಾಗಿ ಮರಳಿ ಜಗತ್ ವೃತ್ತವರೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕೆಎಸ್‌ಆರ್‌ಪಿ, ಡಿಎಆರ್ ಹಾಗೂ ಸಿವಿಲ್ ಪೊಲೀಸರು ನಗರ ಪ್ರದಕ್ಷಣೆ ನಡೆಸಿದರು.