ನವದೆಹಲಿ : ಕೇಂದ್ರೀಯ ಲೋಕ ಸೇವಾ ಆಯೋಗ (UPSC) 2021 ನೇ ಸಾಲಿನ ನಾಗರಿಕ ಸೇವೆಗಳ ಅಂತಿಮ ಫಲಿತಾಂಶ ಅನ್ನು ಬಿಡುಗಡೆ ಮಾಡಿದೆ. ಮಹಿಳೆಯರೇ ಮೊದಲ ಮೂರು ಸ್ಥಾನಗಳನ್ನು ಬಾಚಿಕೊಂಡಿದ್ದು, ಶ್ರುತಿ ಶರ್ಮಾ, ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ, ಐಶ್ವರ್ಯ ವರ್ಮ ಕ್ರಮವಾಗಿ ಮೊದಲ ನಾಲ್ಕು ರ‍್ಯಾಂಕ್ ಗಳಿಸಿದ್ದಾರೆ.
ಯುಪಿಎಸ್ ಸಿ ಪೂರ್ವಭಾವಿ ಪರೀಕ್ಷೆಯು ಅಕ್ಟೋಬರ್ 10, 2021 ರಂದು ನಡೆದಿತ್ತು, ಅದರ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು. ಆಯೋಗವು ಜನವರಿ 7 ರಿಂದ 16, 2022 ರವರೆಗೆ ಮುಖ್ಯ ಪರೀಕ್ಷೆಯನ್ನು ನಡೆಸಿತು ಮತ್ತು ಫಲಿತಾಂಶಗಳನ್ನು ಮಾರ್ಚ್‌ನಲ್ಲಿ ಘೋಷಿಸಲಾಯಿತು. ನಂತರ ಮುಖ್ಯ ಸಂದರ್ಶನವು ಏಪ್ರಿಲ್ 5 ರಂದು ಪ್ರಾರಂಭವಾಗಿ ಮೇ 26 ರಂದು ಮುಕ್ತಾಯವಾಗಿತ್ತು.
ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಕೇಂದ್ರ ಸೇವೆಗಳು, ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳಿಗೆ ನೇಮಕಾತಿಗಾಗಿ 685 ಅಭ್ಯರ್ಥಿಗಳನ್ನು ಯುಪಿಎಸ್‌ಸಿ ಶಿಫಾರಸು ಮಾಡಿದೆ. ಈ ಸೇವೆಗಳಲ್ಲಿ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 749 ಆಗಿದೆ.
ನೇಮಕಾತಿಗೆ ಶಿಫಾರಸು ಮಾಡಿದ 685 ಅಭ್ಯರ್ಥಿಗಳ ಪೈಕಿ 244 ಸಾಮಾನ್ಯ ವರ್ಗ, 73 ಆರ್ಥಿಕವಾಗಿ ದುರ್ಬಲ ವಿಭಾಗ, 203 ಒಬಿಸಿ, 105 ಎಸ್ ಸಿ ಮತ್ತು 60 ಎಸ್ ಟಿ ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ.
ಆಯೋಗವು ಅಧಿಕೃತ ವೆಬ್‌ಸೈಟ್ upsc.gov.in ಅಥವಾ upsconline.nic.in ನಲ್ಲಿ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ.