ಹೊಸದಿಲ್ಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿಚಾರಗಳಿಂದ ಸುದ್ದಿಯಾಗಿರುವ ವಿವಾದಾತ್ಮಕ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC ) ಬುಧವಾರ ರದ್ದುಗೊಳಿಸಿದೆ. ಆಯೋಗ ನಡೆಸುವ ಮುಂದಿನ ಎಲ್ಲಾ ಪರೀಕ್ಷೆಗಳಲ್ಲಿ ಹಾಜರಾಗುವುದನ್ನು ಶಾಶ್ವತವಾಗಿ ನಿರ್ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಜಾ ಖೇಡ್ಕರ್ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಭದ್ರಪಡಿಸಿಕೊಳ್ಳಲು ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗಗಳ (non-creamy layer) ಕೋಟಾಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೂಜಾ ಖೇಡ್ಕರ್ ಅವರ ಅರ್ಹತೆ ಮತ್ತು ಅವರ ಅರ್ಜಿಯ ಸುತ್ತಲಿನ ಸಂದರ್ಭಗಳ ವಿವರವಾದ ಪರಿಶೀಲನೆಯ ನಂತರ UPSC ಪ್ರಕಟಣೆ ಹೊರಡಿಸಿದೆ.
ಲಭ್ಯವಿರುವ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, CSE-2022 ನಿಯಮಗಳ ನಿಬಂಧನೆಗಳಿಗೆ ವಿರುದ್ಧವಾಗಿ ವರ್ತಿಸಿ ತಪ್ಪಿತಸ್ಥರೆಂದು ಕಂಡುಬಂದ ಕಾರಣ ಈ ಕ್ರಮ ಕೈಗೊಂಡಿದೆ ಎಂದು ಯುಪಿಎಸ್ ಸಿ ಹೇಳಿದೆ.
2022 ರಲ್ಲಿ ಆಯ್ಕೆಯಾದ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಅಭ್ಯರ್ಥಿತನವನ್ನು ರದ್ದುಗೊಳಿಸಲಾಗಿದೆ ಮತ್ತು ಮುಂದಿನ ಎಲ್ಲಾ ಪರೀಕ್ಷೆಗಳಿಂದ ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ UPSC ಯ ಅಧಿಕೃತ ಹೇಳಿಕೆ ನೀಡಿದೆ.