Advertisement

ಸರಕಾರದ ಧೋರಣೆಗೆ ಮೇಲ್ಮನೆಯಲ್ಲಿ ಗದ್ದಲ- 7ನೇ ವೇತನ ಆಯೋಗ ಜಾರಿಗೆ ಆಗ್ರಹ

11:09 PM Dec 05, 2023 | Team Udayavani |

ಬೆಳಗಾವಿ: ಸರಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಂಬಂಧಿಸಿದ ವರದಿ ವಿಚಾರದಲ್ಲಿ ಸರಕಾರದ ಧೋರಣೆ ಖಂಡಿಸಿ ಮೇಲ್ಮನೆಯಲ್ಲಿ ಬಾವಿಗಿಳಿದ ವಿಪಕ್ಷಗಳು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಪಟ್ಟುಹಿಡಿದವು. ಇದರಿಂದ ಉಂಟಾದ ಗದ್ದಲದಿಂದ ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು.

Advertisement

ಮಂಗಳವಾರ ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆ ನಿಯಮ 330ರ ಅಡಿ ವಿಷಯ ಪ್ರಸ್ತಾವಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಪೂರ್ಣಗೊಂಡಿದ್ದರೂ, ವಿನಾಕಾರಣ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಅದರಿಂದ ವೇತನ ರೂಪದಲ್ಲಿ ಪಾವತಿಸಬಹುದಾದ ವಾರ್ಷಿಕ ಅಂದಾಜು ಹತ್ತು ಸಾವಿರ ಕೋಟಿ ರೂ.ಉಳಿಯುತ್ತದೆ. ಅದೇ ಹಣವನ್ನು ಈ ವೇತನ ಆಯೋಗ ಜಾರಿಗೆ ವಿನಿಯೋಗಿಸಲು ಅವಕಾಶವಿದೆ. ಆದ್ದರಿಂದ ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ನ ಬಹುತೇಕ ಎಲ್ಲ ಸದಸ್ಯರು ದನಿಗೂಡಿಸಿದರು. ಆಗ ಪ್ರತಿಕ್ರಿಯಿಸಿದ ಸಭಾ ನಾಯಕ ಬೋಸರಾಜ, ಸೂಕ್ತ ಅಧ್ಯಯನ ನಡೆಸುವ ಅಗತ್ಯತೆ ಮನಗಂಡು ಬರುವ ಮಾರ್ಚ್‌ 15ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಡಿಸೆಂಬರ್‌ನಲ್ಲಿದ್ದೇವೆ. ವರದಿ ಕೈಸೇರುತ್ತಿದ್ದಂತೆ ನ್ಯಾಯ ಒದಗಿಸಲು ಸರಕಾರ ಬದ್ಧ ಎಂದರು. ಇದಕ್ಕೆ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು, ವರದಿ ಪೂರ್ಣಗೊಂಡಾಗಿದೆ. ಆದರೆ, ತೆಗೆದುಕೊಳ್ಳಲು ಸರಕಾರ ತಯಾರಿಲ್ಲ. ಈ ಧೋರಣೆ ಯಾಕೆ? ಈ ವಿಚಾರದಲ್ಲಿ ಸ್ವತಃ ಮುಖ್ಯಮಂತ್ರಿಗಳು ಸದನದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಒತ್ತಾಯಿಸಿದರು.

ಮಧ್ಯಪ್ರವೇಶಿಸಿದ ಸಭಾಪತಿಗಳು, ಮನವೊಲಿಸಲು ಯತ್ನಿಸಿದರು. ಆದರೆ, ಪಟ್ಟುಸಡಿಲಿಸದ ಕಾರಣ ಸದನ ಮುಂದೂಡಲಾಯಿತು. ಇದಕ್ಕೂ ಮುನ್ನ ಸದಸ್ಯರಾದ ಶಶೀಲ ನಮೋಶಿ, ಭೋಜೇಗೌಡ, ತೇಜಸ್ವಿನಿಗೌಡ, ಎಸ್‌.ವಿ. ಸಂಕನೂರ, ಅನಿಲ್‌ ಕುಮಾರ್‌, ಮರಿತಿಬ್ಬೇಗೌಡ, ಎಚ್‌. ವಿಶ್ವನಾಥ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next