“ಉಪ್ಪು ಹುಳಿ ಖಾರ ಚಿತ್ರಕ್ಕೆ ಮೊದಲಿನಿಂದಲೂ ಸುಧಾ ಮೂರ್ತಿ ಅವರು ಮೆಂಟರ್ ಎಂದು ಗುರುತಿಸಿಕೊಂಡಿದ್ದಾರೆ. ಚಿತ್ರದ ಮುಹೂರ್ತಕ್ಕೆ ಬಂದು, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರಕ್ಕೆ ಹಾರೈಸಿದ್ದರು ಅವರು. ಆ ನಂತರ ಚಿತ್ರದ ಹಾಡುಗಳನ್ನೂ ಅವರೇ ಬಿಡುಗಡೆ ಮಾಡಿದ್ದರು. ಈಗ ಚಿತ್ರದಲ್ಲೊಂದು ಸಣ್ಣ ಮತ್ತು ವಿಶೇಷವಾದ ಪಾತ್ರವನ್ನು ಮಾಡಿದ್ದಾರೆ. ಸುಧಾ ಮೂರ್ತಿ ಅವರು ಚಿತ್ರದಲ್ಲಿ ನಟಿಸುತ್ತಿರುವುದು ಇದು ಮೊದಲಲ್ಲ.
ಇದಕ್ಕೂ ಮುನ್ನ ಅವರು “ಪ್ರಾರ್ಥನೆ’ ಚಿತ್ರದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ “ಪ್ರೀತಿ ಇಲ್ಲದ ಮೇಲೆ’ ಚಿತ್ರದಲ್ಲಿ ನಟಿಸಿದ್ದರು. ಈಗ ಬಹಳ ವರ್ಷಗಳ ನಂತರ ಅವರು “ಉಪ್ಪು ಹುಳಿ ಖಾರ’ದಲ್ಲಿ ನಟಿಸಿದ್ದಾರೆ. ಆದರೆ, ಅವರ ಪಾತ್ರವೇನು ಎಂಬ ಗುಟ್ಟನ್ನು ಇಮ್ರಾನ್ ಬಿಟ್ಟುಕೊಡುವುದಿಲ್ಲ. “ಕ್ಲೈಮ್ಯಾಕ್ಸ್‌ನಲ್ಲಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರದ್ದು ಅತಿಥಿ ಪಾತ್ರವಾದರೂ ಬಹಳ ಮಹತ್ವದ ಪಾತ್ರ. ಚಿತ್ರದಲ್ಲಿ ಅವರೇನು ಮಾಡುತ್ತಾರೆ ಎಂದು ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ ಇಮ್ರಾನ್.
ಎಲ್ಲಾ ಅಂದುಕೊಂಡಂತೆ ಆದರೆ, ಅಕ್ಟೋಬರ್ ತಿಂಗಳಲ್ಲಿ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಎರಡನೆಯ ಚಿತ್ರವಾದ “ಉಪ್ಪು ಹುಳಿ ಖಾರ’ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅವರು ಶಶಿ, ಧನಂಜಯ್ ಮತ್ತು ಶರತ್ ಎಂಬ ಹೊಸ ಹುಡುಗರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇನ್ನು ಅವರಿಗೆ ನಾಯಕಿಯರಾಗಿ ಜಯಶ್ರೀ, ಅನುಶ್ರೀ ಮತ್ತು ಮಾಶಾ ಎಂಬ ಫಾರಿನ್ ಬೆಡಗಿಯರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಇನ್ನು “ಉಪ್ಪು ಹುಳಿ ಖಾರ’ದಲ್ಲಿ ಮಾಲಾಶ್ರೀ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ಉಪ್ಪು ಹುಳಿ ಖಾರ’ ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರು. ಇನ್ನು ಹಿನ್ನೆಲೆ ಸಂಗೀತ ಬೇರೆಯವರದ್ದು. ಇವೆಲ್ಲಾ ಸೇರಿದರೆ ಒಟ್ಟು ನಾಲ್ವರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಈ ಪೈಕಿ ಜೂಡಾ ಸ್ಯಾಂಡಿ ಮೂರು ಹಾಡುಗಳನ್ನು, ಪ್ರಜ್ವಲ್ ಪೈ ಎರಡು ಹಾಡುಗಳನ್ನು ಮತ್ತು ಕಿಶೋರ್ ಎಕ್ಸಾ ಒಂದು ಹಾಡನ್ನು ಸಂಯೋಜಿಸಿದ್ದಾರೆ. ಇನ್ನು ಗಾಯಕ ಶಶಾಂಕ್ ಶೇಷಗಿರಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ.
ಈ ಚಿತ್ರದ ಇನ್ನೂ ಒಂದು ವಿಶೇಷ ಎಂದರೆ, ಮೂವರು ಜನಪ್ರಿಯ ಕಲಾವಿದರು ಈ ಚಿತ್ರಕ್ಕೆ ಒಂದೊಂದು ಹಾಡನ್ನು ಹಾಡಿರುವುದು. ಗಣೇಶನ ಕುರಿತ ಒಂದು ಹಾಡನ್ನು ಸುದೀಪ್ ಹಾಡಿದ್ದಾರೆ. ಇನ್ನೊಂದು ಹಾಡನ್ನು ಪುನೀತ್ ಹಾಡಿದರೆ, ಚಿತ್ರದಲ್ಲಿರುವ ತರಲೆ ಹಾಡೊಂದನ್ನು ಸಾಧು ಹಾಡಿದ್ದಾರೆ. ಒಂದು ಹಾಡನ್ನು ಅಮೇರಿಕಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಒಂದು ಹಾಡನ್ನು ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.